ಸೋಫೋಕ್ಲಿಸ್ನ "ದೊರೆ ಈಡಿಪಸ್": ವಿಧಿ, ಮಾನವ ಸಂಘರ್ಷ ಮತ್ತು ಆತ್ಮವಿಮರ್ಶೆಯ ತಾತ್ವಿಕ ವಿಶ್ಲೇಷಣೆ
Authors/Creators
- 1. ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ - ೫೬೨೧೦೧
Description
ಪ್ರಾಚೀನ ಗ್ರೀಕ್ ಸಾಹಿತ್ಯವು ಪುರಾಣ, ಮಹಾಕಾವ್ಯ, ಗೀತಕಾವ್ಯ, ನಾಟಕ, ಇತಿಹಾಸ ಮತ್ತು ತತ್ತ್ವಚಿಂತನೆಯ ಮೂಲಕ ಮಾನವ ಜೀವನದ ಮೂಲಭೂತ ಪ್ರಶ್ನೆಗಳನ್ನು ಅನ್ವೇಷಿಸಿದ ಮಹತ್ವದ ಸಾಹಿತ್ಯ ಪರಂಪರೆಯಾಗಿದೆ. ದೇವರು ಮತ್ತು ಮನುಷ್ಯನ ಸಂಬಂಧ, ವಿಧಿ ಮತ್ತು ಸ್ವಾತಂತ್ರ್ಯ, ಜ್ಞಾನ ಮತ್ತು ಅಜ್ಞಾನ, ನೈತಿಕತೆ ಮತ್ತು ಹೊಣೆಗಾರಿಕೆ. ವೀರತ್ವ ಮತ್ತು ಮಾನವ ದೌರ್ಬಲ್ಯಗಳು ಅದರ ಪ್ರಮುಖ ಚಿಂತನಾ ವಿಷಯಗಳಾಗಿವೆ. ಈ ಪರಂಪರೆಯಲ್ಲಿ ಗ್ರೀಕ್ ದುರಂತ ನಾಟಕವು ಮಾನವ ಜೀವನದ ಸಂಕೀರ್ಣತೆ ಮತ್ತು ಅದರ ಅಂತರಂಗದ ಸಂಘರ್ಷಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ ಕಲಾರೂಪವಾಗಿದೆ. ಸೋಫೋಕ್ಲಿಸ್ನ 'ದೊರೆ ಈಡಿಪಸ್' ಗ್ರೀಕ್ ದುರಂತ ನಾಟಕದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಈ ನಾಟಕದ ಕೇಂದ್ರದಲ್ಲಿ ಈಡಿಪಸ್ ಎಂಬ ರಾಜನ ಜೀವನವಿದೆ. ತಂದೆಯನ್ನು ಕೊಂದು ತಾಯಿಯನ್ನು ವಿವಾಹವಾಗುವನೆಂಬ ಭವಿಷ್ಯವಾಣಿಯಿಂದ ತಪ್ಪಿಸಿಕೊಳ್ಳಲು ಅವನು ಕೈಗೊಳ್ಳುವ ಪ್ರತಿಯೊಂದು ಪ್ರಯತ್ನವೂ ಕೊನೆಗೆ ಅದೇ ಭವಿಷ್ಯವಾಣಿಯ ನೆರವೇರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ವಿಧಿ ಮತ್ತು ಮಾನವ ಪ್ರಯತ್ನಗಳ ಸಂಬಂಧ ನಾಟಕದ ಕೇಂದ್ರ ಪ್ರಶ್ನೆಯಾಗಿ ರೂಪುಗೊಳ್ಳುತ್ತದೆ. ಇದರ ಜೊತೆಗೆ ನಾಟಕವು ಜ್ಞಾನ ಮತ್ತು ಅಜ್ಞಾನ, ಸತ್ಯ ಮತ್ತು ಭ್ರಮೆ, ದೃಷ್ಟಿ ಮತ್ತು ಕುರುಡುತನ, ಅಹಂಕಾರ ಮತ್ತು ಆತ್ಮಜ್ಞಾನಗಳ ನಡುವಿನ ಸಂಘರ್ಷವನ್ನೂ ಚಿತ್ರಿಸುತ್ತದೆ. ಸ್ಪಿಂಕ್ಸ್ನ ಒಗಟನ್ನು ಪರಿಹರಿಸಿದ ಬುದ್ದಿವಂತ ಈಡಿಪಸ್ ತನ್ನದೇ ಜೀವನದ ಒಗಟನ್ನು ಪರಿಹರಿಸಲು ವಿಫಲನಾಗುತ್ತಾನೆ. ಆದರೆ ಸತ್ಯದ ಹುಡುಕಾಟವನ್ನು ಮುಂದುವರಿಸಿದಾಗ ಕೊನೆಗೆ ತನ್ನ ನಿಜವಾದ ಗುರುತು ಮತ್ತು ಬದುಕಿನ ಭಯಾನಕ ಸತ್ಯವನ್ನು ಅರಿಯುತ್ತಾನೆ. ಹೀಗಾಗಿ ಈಡಿಪಸ್ನ ಪತನವು ಕೇವಲ ರಾಜನ ದುರಂತವಲ್ಲ; ಅದು ಅಜ್ಞಾನದಿಂದ ಆತ್ಮಜ್ಞಾನದತ್ತ ಸಾಗುವ ಮಾನವನ ನೋವಿನ ಪ್ರಯಾಣವಾಗಿದೆ.
Other (Kannada)
This article was originally published in IJAR Journal, Vol 13 Issue 2 on 29-June-2026.
This record on Zenodo was created on 10-September-2026 for open-access archival purposes. The content of the article is unchanged from the original publication.