Published July 6, 2026 | Version v1

ಸರ್ವಜ್ಞ ಮತ್ತು ವೇಮನರ ಚಿಂತನೆಯಲ್ಲಿ ವೈಚಾರಿಕತೆ

  • 1. ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ.

Description

ಕರ್ನಾಟಕದ ಸರ್ವಜ್ಞ ಮತ್ತು ಆಂಧ್ರದ ಮಹಾಯೋಗಿ ವೇಮನ ಇವರಿಬ್ಬರೂ ಸಮಕಾಲೀನ ಹಾಗೂ ಸಮಾನ ಮನಸ್ಕರು. ಹದಿನೈದನೆಯ ಶತಮಾನದ ಕಾಲಘಟ್ಟದಲ್ಲಿ ಬಾಳಿದ ಶಿವಜ್ಞಾನಿಗಳು, ಶಿವನ ಅವತಾರಿಗಳು. ಈರ್ವರೂ ದಿಗಂಬರರಾಗಿಯೇ ಲೋಕ ಸಂಚಾರಗೈದು ಪರಮಾನುಭವದ ಬೋಧೆ ಮಾಡಿದವರು. ಲೋಕದ ಮನುಜರ ಜಂಜಾಟ, ತೊಳಲಾಟಗಳನ್ನು ಕಂಡು ಸನ್ಮಾರ್ಗವನ್ನು ತೋರಲು ಬಂದ ಮಹಿಮಾ ಪುರುಷರು. ಇಬ್ಬರು ಹೇಳುವ ತತ್ತ್ವಬೋಧೆ, ತತ್ವಾದರ್ಶಗಳು ಇಂದಿಗೂ ಎಂದೆಂದಿಗೂ ದಾರಿದೀಪದಂತಿವೆ. ಜನರಲ್ಲಿಯ ಮನದ ಮೈಲಿಗೆಯನ್ನು ಹಸನುಗೊಳಿಸಿ, ನಿರಾಳವಾಗಿ ಶುದ್ಧ ಜೀವನವನ್ನು ಬದುಕನ್ನು ಸಾಗಿಸಲು ಒಳ್ಳೆಯಮಾರ್ಗವನ್ನು ತೋರಿಸಿದವರು. 

ವೇಮನ ಮತ್ತು ಸರ್ವಜ್ಞರು ಸಮಾಜ ಧರ್ಮದ ಕುರಿತು ತಮ್ಮ ತಮ್ಮ ಪದ್ಯಗಳ ಮೂಲಕ ಸಾಮಾನ್ಯರಿಗೂ ತಿಳಿಯುವಂತೆ ಹೇಳಿದವರು ಈ ನಾಡಿನ, ದೇಶದ ಚಿಂತಕರೀರ್ವರು, ಉನ್ನತ ದರ್ಜೆಯ ಸಂತರು, ಮಹಂತರು, ತಮ್ಮ ಅಧ್ಯಾತ್ಮ ಪರಂಪರೆಯ ತತ್ವಾದರ್ಶಗಳನ್ನು ಶ್ರೀ ಸಾಮಾನ್ಯನಿಗೂ ತಿಳಿಯುವಂತೆ ಬೋಧಿಸಿದ ಪುಣ್ಯಪುರುಷರು. ಒಬ್ಬರದು ತೆಲುಗು ಭಾಷೆಯ ಆಡುನುಡಿಯಾದರೆ, ಇನ್ನೊಬ್ಬರದು ಕನ್ನಡ ನಾಡು ನುಡಿಯ ಆಡು ಭಾಷೆಯಾಗಿದೆ. ಇಬ್ಬರೂ ಸಿದ್ದಿ-ಸಾಧನೆಯ ದಿವ್ಯ ಪುರುಷರು, ತತ್ವ ಚಿಂತಕರ ಚಿಂತನೆಗಳನ್ನು, ದರ್ಶನಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಹೊಸ ಚಿಂತನೆಗಳು ಉದ್ಭವವಾಗಲು ಸಹಕಾರಿಯಾಗುತ್ತದೆ. 

ಕನ್ನಡ ಸಾರಸ್ವತ ಲೋಕದಲ್ಲಿ ನಮ್ಮೆಲ್ಲರ ಗಮನ ಸೆಳೆಯುವವರೆಂದರೆ ಕನ್ನಡಿಗರ ಕಣ್ಮಣಿ, ತ್ರಿಪದಿಬ್ರಹ್ಮ, ಜನಪದ ಕವಿ, ನೀತಿಕವಿ, ಅಶುಕವಿ ಸರ್ವಜ್ಞ ಮೂರ್ತಿ. ಸಮಾಜದ ಒಳಿತಿಗಾಗಿ, ಉತ್ತಮಿಕೆಗಾಗಿ ಶ್ರಮಿಸಿದ ಸುಧಾರಣಾವಾದಿ ಮತ್ತು ಮಹಾಚಿಂತಕ. ತಮಿಳು ಸಾಹಿತ್ಯದಲ್ಲಿ ‘ತಿರುವಳ್ಳುವರ್’ ಕವಿಗೂ, ತೆಲುಗು ಭಾಷೆಯಲ್ಲಿ ‘ವೇಮನ’ ಕವಿಗೂ, ಮಹಾರಾಷ್ಟ್ರ ವಾಙ್ಮಯದಲ್ಲಿ ‘ರಾಮದಾಸ’ರಿಗೂ, ಹಿಂದಿ ಸಾಹಿತ್ಯದಲ್ಲಿ ‘ಕಬೀರದಾಸ’ರಿಗೂ ಇರುವ ಸ್ಥಾನವೇ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞ ಮೂರ್ತಿಗೆ ಇದೆ. 

‘ಸರ್ವಜ್ಞ’ ಎಂಬುದರ ಅರ್ಥ ಎಲ್ಲವನ್ನು ಬಲ್ಲವನು ಅಥವಾ ತಿಳಿದವನು ಎಂದರ್ಥ. ಅಂತೆಯೇ ಈ ಹೆಸರಿಗೆ ತಕ್ಕಂತೆಯೇ ಇದ್ದ ಕವಿಯೀತ. ಸರ್ವಜ್ಞ ಸಾಮಾನ್ಯ ಕುಟುಂಬದಿಂದ ಉದಯಿಸಿದ ರವಿತೇಜ. 15ನೆಯ ಶತಮಾನದ ಕಾಲ ಘಟ್ಟದಲ್ಲಿ ಬದುಕಿ ಬಾಳಿದ ಧೀಮಂತ ಜನಪರ ಕವಿ. ಧಾರವಾಡ ಜಿಲ್ಲೆಯ ಇಂದಿನ ಹಿರೇಕೆರೂರ ತಾಲೂಕಿನ ಮಾಸೂರು ಸರ್ವಜ್ಞನ ಹುಟ್ಟೂರು. ಬಸವರಸ ತಂದೆಯಾದರೆ, ಕುಂಬಾರ ಮಾಳಿ ಹೆತ್ತ ತಾಯಿ. ಮಲ್ಲಮ್ಮ ಸಾಕು ತಾಯಿ. ಈತನ ಮೊದಲ ಹೆಸರು ಪುಷ್ಪದತ್ತ. ಬೆಳೆ ಬೆಳೆದಂತೆಲ್ಲ ಅನುಭವದ ಆಗರವಾಗಿ, ಸರ್ವರೊಳಗೆ ಒಂದೊಂದು ವಿದ್ಯೆಯನ್ನು ಕಲಿತು ವಿದ್ಯೆಯ ಪರ್ವತವೇ ತಾನಾಗಿ, ವಚನಕಾರನಾಗಿ ಅರಳಿದಾಗ ಸರ್ವಜ್ಞನಾದ. ಇದು ತನ್ನ ವಚನಕ್ಕೆ ಅಂಕಿತವೂ ಆಯಿತು. ಸರ್ವಜ್ಞ ಸನ್ಮಾರ್ಗದ ಹಾದಿ ಹಿಡಿದು ಮುಂಡೆ ಬೋಳಿಸಿಕೊಂಡು, ಮೈಮೇಲೆ ತುಂಡು ಗಂಬಳಿ ಹೊದೆದು, ಹಿಂಡನಗಲಿದ ಗಜದಂತೆ ಊರೂರು ತಿರುಗುತ್ತ ಕರಡಿಕಪ್ಪರ ಹಿಡಿದು, ದೇಶ ಸಂಚಾರ ಮಾಡುತ್ತ ಜನರಿಗೆ ನಾನಾ ಪ್ರಕಾರದ ರೀತಿ-ನೀತಿ, ಜೀವನದ ಕ್ರಮಗಳನ್ನು ಬೋಧಿಸುತ್ತಿದ್ದನು. ಜೊತೆಗೆ ಲೋಕ ಸೇವೆ ಮಾಡುತ್ತ ಜೀವನವನ್ನು ಶ್ರೀಗಂದದಂತೆ ಸವೆಯಿಸಿ, ಕಡೆಗೆ ಶಿವಯೋಗ ಸಮಾಧಿಯಲ್ಲಿ ಲಿಂಗೈಕ್ಯರಾದರೆಂದು ತೋರುತ್ತದೆ. ಸರ್ವಜ್ಞರ ಸುಮಾರು ಎರಡು ಸಾವಿರದಷ್ಟು ತ್ರಿಪದಿಗಳು ನಮಗಿಂದು ಓದಿ ಸವಿಯಲಿಕ್ಕೆ ಅನುಕೂಲವಾಗಿವೆ. 

ಮಹಾಯೋಗಿ ವೇಮನ ಪ್ರಖ್ಯಾತಚಿಂತಕ, ದಾರ್ಶನಿಕ, ಯೋಗಿಗಳ ಮಹಾಯೋಗಿ, ಈತ ರೆಡ್ಡಿ ರಾಜವಂಶದ ಮನೆತನದವನು. ವೇಮನ ಕ್ರಿ.ಶ. 1412ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮಕುಮಾರ ಗಿರಿರೆಡ್ಡಿ ಮತ್ತು ಮಲ್ಲಾಂಬೆ ಎಂಬ ದಂಪತಿಗಳ ಮಗನಾಗಿ ಜನಿಸಿದರು. ನೋಡಲು ಸ್ಪುರದ್ರೂಪಿ. ಈತನ ಅಣ್ಣ ಭರಮರೆಡ್ಡಿ. ಭರಮರೆಡ್ಡಿಯ ಪತ್ನಿಯೇ ಹೇಮರಡ್ಡಿ ಮಲ್ಲಮ್ಮ. ಈಕೆ ವೇಮನನ ಅತ್ತಿಗೆ. ಮಲ್ಲಮ್ಮನನ್ನು ತಾಯಿಯಂತೆಯೇ ಕಂಡವನು. ಆಂಧ್ರದಲ್ಲಿ ವೇಮನನ ವಂಶಸ್ಥರೇ ಬಹು ಪ್ರಖ್ಯಾತರು. ವೇಮ ಎಂದರೆ ಹೇಮ. ಹೇಮ ಎಂದರೆ ಬಂಗಾರ. ಬಂಗಾರದಂತಹ ಮನೆತನವೇ ಮೇಮನರ ಮನೆತನವಾಗಿತ್ತು. 

ವೇಮನನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವನು. ರಾಜಪುತ್ರನಾದುದರಿಂದ ವೇಮನನು ಚಿತ್ತರಂಜನಿಯೆಂಬ ದೇವದಾಸಿಯ ಬೆನ್ನು ಹತ್ತಿದುದ್ದನ್ನು ಕಂಡ ಅತ್ತಿಗೆಯು ಈತನ ಮನ ಪರಿವರ್ತನೆ ಮಾಡಿದ ಪುಣ್ಯವಂತೆ. ಅತ್ತಿಗೆಯ ಮಾತನ್ನು ಶಿರಸಾವಹಿಸಿ ಪಾಲಿಸಿದ ಪರಿಣಾಮದಿಂದ ಆ ದೇವದಾಸಿಯಿಂದ ಬಿಡುಗಡೆಗೊಂಡು, ದಿಗಂಬರ ದೀಕ್ಷೆ ಡಪೆದು ಸಕಲ ವೈಭವ ಸಾಮ್ರಾಜ್ಯವನ್ನು ತೊರೆದು ಸಂಚಾರ ಮಾಡುತ್ತ, ಸತ್ಸಂಗಗಳನ್ನು ನೆರವೇರಿಸುತ್ತ ಬಂದನು. ಈತನಿಗೆ ಸೋಮಶೇಖರನೆಂಬ ಗುರುವಿನಿಂದ ಪ್ರಾಥಮಿಕ ಶಿಕ್ಷಣವನ್ನು ಅರಮನೆಯಲ್ಲಿಯೇ ಕೊಟ್ಟಿದ್ದುಂಟು. ಆದರೆ ಯೋಗದ ಅಭ್ಯಾಸ ದೊರೆತದ್ದು ಗವಿ-ಗುಹೆಗಳಲ್ಲಿ. 

ಬಾಲ್ಯ ಸ್ನೇಹಿತ ಅಕ್ಕಸಾಲಿಗರವನಾದ ಅಭಿರಾಮನ ಸಲಹೆ ಸೂಚನೆ ಮಿಗಿಲಾದ್ದದ್ದು. ಅದೇ ರೀತಿಯಾಗಿ ಯೋಗ ಗುರುವಿನ ದರ್ಶನಾಶೀರ್ವಾದ, ರಾಮರೆಡ್ಡಿ-ನೀಲಕಂಠ ಶಿಷ್ಯರ ಸೇವಾ ನಿಷ್ಠೆಗಳಿಂದ ವೇಮನನು ಮಹಾಯೋಗಿಯಾದ. ಈ ರೀತಿಯಲ್ಲಿ ವಚನಗಳನ್ನು ರಚಿಸುತ್ತಾ, ಕೊಂಡವೀಡು ಪಟ್ಟಣ, ರಾಯಲ ಸೀಮೆ ಪ್ರದೇಶದಲ್ಲಿ ಸುತ್ತಿ ಪ್ರಚಾರ ಮಾಡಿ ಶಾರ್ವರಿ ನಾಮ ಸಂವತ್ಸರ ಜನವರಿ ಶ್ರೀ ರಾಮನವಮಿ ದಿನದಂದು ಜನವರಿ 19, 1480ರಲ್ಲಿ ವೇಮನರು ಇಹಲೋಕ ತ್ಯಜಿಸಿದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕದಿರು ತಾಲ್ಲೂಕಿನ ಕಟಾರುಪಳ್ಳಿಯಲ್ಲಿ ಅವರ ಸಮಾಧಿ ಇದ್ದು ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಅವರ ಸಮಾಧಿ ಜ್ಞಾನೋಪಾಸಕರಿಗೆ, ಆತ್ಮ ದರ್ಶನಾಕಾಂಕ್ಷಿಗಳಿಗೆ ಪವಿತ್ರ ಯಾತ್ರಾ ಸ್ಥಾನವಾಗಿದೆ. ವೇಮನನ ‘ವಿಶ್ವದಾಭಿರಾಮ ಕೇಳುವೇಮ’ ಎಂಬ ವಚನಾಂಕಿತದೊಂದಿಗೆ 3812 ಪದ್ಯಗಳು ಚೌಪದಿಗಳಿಂದ ಪ್ರಕಟಗೊಂಡಿವೆ. 

ಸರ್ವಜ್ಞ ಮತ್ತು ವೇಮನ ಕವಿಗಳಿಬ್ಬರೂ ಸಮಕಾಲೀನರು. ಇವರಿಬ್ಬರ ಮಧ್ಯದಲ್ಲಿ ಹತ್ತಿಪ್ಪತ್ತು ವರ್ಷಗಳ ವ್ಯತ್ಯಾಸವಿರಬಹುದೆಂದು ಅವರ ವಚನಗಳ ಆಧಾರದಿಂದ ಕಂಡುಕೊಳ್ಳಬಹುದು. ಮಹಾಯೋಗಿ ವೇಮನನ ಬದುಕು ತುಂಬಾ ರೋಚಕ ಕತೆಯಂತಿದ್ದು, ಅದು ಓದುಗರ ಆಸಕ್ತಿ ಕೆರಳಿಸುವಂತದ್ದು. ಸತ್ಯವನ್ನು ಹೇಳುವ ವ್ಯಕ್ತಿ ಹೇಗೆ ಸಮಾಜದ ತಿರಸ್ಕಾರಗಳಿಗೆ ಗುರಿಯಾಗುತ್ತಾನೆ. ತಿರಸ್ಕಾರದ ಅವಮಾನಗಳಿಗೆ ಹೇಗೆ ತಪ್ಪುದಾರಿ ಹಿಡಿಯುತ್ತಾನೆ. ಖಂಡಿತಾ ಅವಕಾಶ ಸಿಕ್ಕರೆ ಅವನೂ ಹೇಗೆ ಮಹಾನುಭಾವನಾಗುತ್ತಾನೆ ಎನ್ನುವುದು ತುಂಬಾ ಮನೋಜ್ಞವಾಗಿ ಮೂಡಿ ಬಂದಿದೆ. 

ಸರ್ವಜ್ಞನು ಆಶುಕವಿ. ಆತ ಜನರಾಡುವ ಮಾತುಗಳಲ್ಲಿಯೇ ತನ್ನ ವಚನಗಳನ್ನು ರಚಿಸಿದ್ದುಂಟು. ಅಂದರೆ ಯಾವುದಾದರೊಂದು ವಿಷಯವು ನೆನಪಾದೊಡನೆಯೇ ಅದರ ಮೇಲೆ ಕವನ ಬರೆಯತಕ್ಕವನು. ಇವನು ಹಲಗೆ ಬಳಪವನ್ನು ಹಿಡಿದು ಪೇಚಾಡಿದವನಲ್ಲ. ಬರೆಬರೆದಂತೊಡೆದು ತೊಟ್ಟನೇ ನಿಟ್ಟಿಸಿ ಕಷ್ಟಪಟ್ಟವನಲ್ಲ. ಇವನ ತ್ರಿಪದಿ ರೂಪದ ವಚನಗಳು ಸರಳವಾದುದು, ಸಹಜವಾದುದು. ಇವನ ವಚನಗಳು ಒಂದೇ ಕಡೆಗೆ ಕುಳಿತು ಬರೆದವುಗಳಲ್ಲ. ಅವು ದೇಶಾಟನದಲ್ಲಿ ಪ್ರಸಂಗ ಬಂದಾಗ ಮಿಂಚಿನಂತೆ ಹೊಳೆದು ಊಟೆಯ ನೀರಿನಂತೆ ಉಕ್ಕಿ ಬಂದವುಗಳಾಗಿವೆ. ತನ್ನ ವಚನಗಳನ್ನು ಬರೆಯಲು ಜನಪದ ಗರತಿಯರು ಹಾಡಿದ ಸೊಲ್ಲಿನಲ್ಲಿಯೇ, ಕನ್ನಡಮಯವಾದ ತ್ರಿಪದಿ ಛಂದಸ್ಸನ್ನೇ ಆಯ್ಕೆ ಮಾಡಿಕೊಂಡಿದ್ದಾನೆ. ಕಾಡಿನ ಕೊರಡನ್ನು ಸುರ ತರುವನ್ನಾಗಿ ಮಾಡಿದ್ದಾನೆ. ಇದ್ದಲ್ಲಿಯನ್ನು ವಜ್ರವನ್ನಾಗಿ ಮಾರ್ಪಡಿಸಿದ್ದಾನೆ. 

ಸರ್ವಜ್ಞ ಲೋಕಕ್ಕೆ ನೀತಿಯನ್ನು ಉಪದೇಶಿಸಿ ಸಮಾಜದಲ್ಲಿಯ ಅಜ್ಞಾನ ಅಂಧಶ್ರದ್ಧೆಗಳನ್ನು ಹೋಗಲಾಡಿಸಿ, ಸಮಾಜಕ್ಕೆ ನೀತಿ ಮಾರ್ಗವನ್ನು ತೋರಿಸಿ, ಸಮಾಜ ಸುಧಾರಣೆಮಾಡಿ ಜನರನ್ನು ಸನ್ಮಾರ್ಗದತ್ತ ನಡೆಸಲು ಶ್ರಮಿಸಿದನು. ಬದುಕಿನ ಆದರ್ಶಗಳನ್ನು ಮೂಡಿಸುವುದರ ಜೊತೆಜೊತೆಗೆ ಸಮಾಜದ ಓರೆಕೋರೆಗಳ ಚಿತ್ರಣಗಳನ್ನು ಬಿಡಿಸಿದ್ದಾನೆ. ಸಮಾಜದಲ್ಲಿ ತಾನು ಕಂಡುಂಡ ಅನುಭವಗಳನ್ನು ವಚನಗಳಲ್ಲಿ ಅಭಿವ್ಯಕ್ತಿಸಿದ್ದಾನೆ. ಸಾಮಾಜಿಕ ಕಳಕಳಿಯು ಅವನ ಮುಖ್ಯಗುರಿಯಾಗಿದ್ದು, ಅದರ ಸ್ವಾಸ್ಥ್ಯವನ್ನು ಕಾಪಾಡಲು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ವಚನಗಳನ್ನು ಬಳಸಿಕೊಂಡಿದ್ದಾನೆ. 

ಚನ್ನವೀರ ಕಣವಿ ಅವರು ಹೇಳುವಂತೆ “ಸರ್ವಜ್ಞನ ಸಾಮಾಜಿಕ ಪ್ರಜ್ಞೆ ಅದ್ಭುತವಾದುದು. ಸಮಾಜದಲ್ಲಿಯ ವ್ಯಕ್ತಿಗಳ ಲೋಪದೋಷಗಳನ್ನು ಲೌಕಿಕ ರೀತಿ ನೀತಿಗಳಲ್ಲಿಯ ಅಸಂಬದ್ಧತೆಯನ್ನು ಅವನು ಕಟುವಾಗಿ ಖಂಡಿಸಿದರೂ, ಅದರ ಅಡಿಯಲ್ಲಿ  ಅಂತಃಕರಣ ಮಿಡಿಯುತ್ತಿದೆ. ಪ್ರಪಂಚದಲ್ಲಿಯ ಅನ್ಯಾಯ ಅನಾಚಾರಗಳನ್ನು ಕಂಡು ಪ್ರಪಂಚದ ಬಗ್ಗೆ ರೋಷ, ಅಸಹನೆಗಳ ಉದ್ದೇಶ ಜನರು ತಮ್ಮ ಬಾಳನ್ನು ಹಸನುಗೊಳಿಸಿಕೊಂಡು ಒಳಿತಿಗಾಗಿ ಬದುಕಬೇಕು” ಎಂಬ ಮಾತನ್ನು ಸ್ಮರಿಸುತ್ತಲೇ ಸರ್ವಜ್ಞನು ತನ್ನ ಕಾಲದ ಸಮಾಜದ ಕುರಿತು ನೀಡಿದ ಚಿತ್ರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. 

ಅಂದಿನ ಸಮಾಜದಲ್ಲಿ ಧರ್ಮ, ಧಾರ್ಮಿಕತೆಯ ಹೆಸರಿನಲ್ಲಿ ಅನಾಚಾರಗಳನ್ನೆಸಗುವ ಗುಂಪುಗಳು ಇದ್ದವೆಂಬುದಕ್ಕೆ ಈ ಕೆಳಗಿನ ವಚನ ಸಾಕ್ಷಿಯನ್ನು ಒದಗಿಸುತ್ತದೆ. ಅಲ್ಲದೇ ಇಂಥ ಅನೇಕ ವಚನಗಳನ್ನು ಸರ್ವಜ್ಞ ಕವಿಯು ವಿಡಂಬನಾತ್ಮಕವಾಗಿ ರಚಿಸಿರುವುದನ್ನು ಕಾಣಬಹುದು. -

‘ನಿಷ್ಠೆ ಇದ್ದಡೆ ಶಿವನು ಗಟ್ಟೆಗೊಂಡೊಳಗಿಪ್ಪ

ನಿಷ್ಠೆಯಿಲ್ಲದಲೆ ಭಜಸಿದಡೆ ಶಿವನವನ

ಬಿಟ್ಟು ಬಯಲಪ್ಪ ಸರ್ವಜ್ಞ’

ಸರ್ವಜ್ಞನು ತನ್ನ ಕಾಲದ ಸಮಾಜದಲ್ಲಿ ಕಂಡ ಮತ್ತೊಂದು ಚಿತ್ರಣವೆಂದರೆ ಅದು ಜಾತಿ ವ್ಯವಸ್ಥೆ. ಇದು ಅಂದಿನ ಕಾಲದಲ್ಲಿಯೂ ಪ್ರಬಲವಾಗಿ ಬೇರೂರಿತ್ತು ಎಂಬುದನ್ನು ಜಾತಿ ವ್ಯವಸ್ಥೆಯನ್ನು ಕುರಿತಾಗಿ ರಚಿಸಿದ ತ್ರಿಪದಿಗಳೆ ಸಾಕ್ಷಿಯಾಗಿ ನಿಲ್ಲುತ್ತವೆ. 

‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ

ಜಾತಿ ವಿಜಾತಿ ಎನಬೇಡ ದೇವನೊಲಿ

ದಾತನೆ ಜಾತ ಸರ್ವಜ್ಞ’

ತ್ರಿಪದಿಯು ಅಂದಿನ ಕಾಲದ ಜಾತಿ ವ್ಯವಸ್ಥೆಗೆ ಸಾಕ್ಷಿಯಾಗಿದೆ. ಎಂಬ ಇಲ್ಲಿ ಸಮಾಜದಲ್ಲಿರುವ ಜಾತಿಯನ್ನು ಕವಿಯು ವಿಮರ್ಶಿಸಿದ್ದಾರೆ. ಅದು ಅಲ್ಲಿರುವ ಲೋಪ. ಹಾಗಾದರೆ ಲೋಪವನ್ನು ಕವಿ ಎತ್ತಿ ಹೇಳಿದ್ದಾನೆ. ಅದನ್ನು ಕಣ್ಣಾರೆ ಕಂಡ ಕವಿಯು ಅವುಗಳನ್ನು ನಿರ್ದಶನ ರೂಪದಲ್ಲಿ ತನ್ನ ತ್ರಿಪದಿಗಳಲ್ಲಿ ತರುವ ಪ್ರಯತ್ನ ಮಾಡಿದ್ದಾನೆ. 

ಹೀಗೆ ಸರ್ವಜ್ಞ ಕವಿಯ ತ್ರಿಪದಿಯ ರಚನೆಯನ್ನು ಗಮನಿಸಿದರೆ, ಸಮಾಜದ ಹುಳುಕುಗಳನ್ನು ಹೇಳುತ್ತಲೇ, ತನ್ನ ಕಾಲದ ಸಮಾಜ ಹೇಗಿತ್ತು ಎಂಬುದನ್ನು ಸೂಚ್ಯವಾಗಿಯೇ ಹೋಲಿಕೆ, ಪ್ರತಿಮೆಗಳು, ಸಂಕೇತಗಳ ರೂಪದಲ್ಲಿ ಹೇಳುತ್ತಾನೆ. ಇದರಿಂದಾಗಿ ಅವನ ಕಾಲದ ಸಮಾಜದಲ್ಲಿಯೂ ಸಹಿತ ಧಾರ್ಮಿಕ, ಸಂಘರ್ಷಗಳು, ಜಾತಿವ್ಯವಸ್ಥೆ, ಡಾಂಭಿಕತೆ, ಚಟಗಳು, ಸೂಳೆಗಾರಿಕೆ, ಸುಂಕ ವಸೂಲಿಯಂಥಹ ಸಮಾಜ ಘಾತುಕ ಚಟುವಟಿಕೆಗಳು ನಡೆಯುತ್ತಿದ್ದುದ್ದನ್ನು ಇಲ್ಲಿ ಗುರುತಿಸಬಹುದು. 

ಸರ್ವಜ್ಞನು ಗುರು, ಜ್ಞಾನ, ಸಜ್ಜನರು-ದುರ್ಜನರು, ತ್ಯಾಗ, ಸತ್ಯದಂಥ ಅನೇಕ ಮೌಲ್ಯಗಳನ್ನು, ಕಾಲಜ್ಞನ, ಜಾಣ್ಮೆಯ ನುಡಿಗಳು, ಒಗಟುಗಳು ಹೀಗೆ ವೈವಿಧ್ಯಪೂರ್ಣವಾದ ವಿಶ್ವವ್ಯಾಪಕವಾದ ವಿಷಯಗಳನ್ನು ಕುರಿತು ವಚನಗಳನ್ನು ರಚಿಸಿದ್ದಾನೆ. ಆದ್ದರಿಂದ ‘ಆಡು ಮುಟ್ಟದ ಗಿಡವಿಲ್ಲ, ಸರ್ವಜ್ಞನು ಹೇಳದ ವಿಷಯವಿಲ್ಲ’ ಎಂಬುದು ವಾಸ್ತವಿಕ ಸಂಗತಿಯಾಗಿದೆ. ದೇವರು ಸರ್ವಾಂತರ್ಯಾಮಿ. ಅವನು ಅಣುರೇಣು ತೃಣಕಾಷ್ಠಗಳಲ್ಲಿ ಚೈತನ್ಯ ರೂಪದಲ್ಲಿ ಅಡಗಿದ್ದಾನೆ. ಅವನನ್ನು ಬಾಹ್ಯರೂಪದಲ್ಲಿ ಕಂಡುಕೊಳ್ಳುವ ಬದಲಾಗಿ ಜೀವಗಳಲ್ಲಿರುವ ಚೈತನ್ಯದಲ್ಲಿ ಕಂಡುಕೊಳ್ಳುವದು ನಿಜವಾದ ತಿಳುವಳಿಕೆಯಾಗಿದೆ. ಇದು ಸಾಧನೆಯ ಮೂಲಕ ಸಾಧ್ಯವಾಗುವಂತಹದ್ದು ಎಂದಿದ್ದಾನೆ. 

‘ಸಣ್ಣ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ

ಬಣ್ಣಿಸಿ ಬರೆದ ಪಟದೊಳಗೆ ಇರುವಾತ

ತನ್ನೊಳಗೆ ಇರನೆ ಸರ್ವಜ್ಞ’

ಹೀಗೆ ಎಲ್ಲಾ ಜೀವಿಗಳಲ್ಲಿ ಚೈತನ್ಯ ರೂಪಿಯಾಗಿರುವ ದೇವರು ಮನುಷ್ಯರಲ್ಲಿಯೂ ಇದ್ದಾನೆ. ನಮ್ಮ ಹೃದಯದಲ್ಲಿ ಆತ್ಮ ಸ್ವರೂಪಿಯಾದ ಪರಮಾತ್ಮನನ್ನು ಕಂಡುಕೊಳ್ಳುವ ಸುಲಭವಾದ ಮಾರ್ಗವೆಂದರೆ ಶೃದ್ಧೆ ನಿಷ್ಠೆಯಿಂದ ಕೂಡಿದ ಭಕ್ತಿಯಾಗಿದೆ. 

ಅಗ್ನಿಯ ಸಂಗದಿಂದ ನಮ್ಮ ದೇಹವು ಕಾಯುತ್ತದೆ. ನೀರಿನ ಸಂಗದಿಂದ ದೇಹ-ಮನಸ್ಸು ಎರಡೂ ತಂಪಾಗುತ್ತವೆ. ಹಾಗೆಯೇ ಬೆಂಕಿಯಂತಿರುವ ದುರ್ಜನರ ಸಂಗದಿಂದ ನಮಗೆ ದುಃಖವಾಗುತ್ತದೆ. ಕಾರಣ ನೀರಿನಂತಿರುವ ಸಜ್ಜನರ ಸಂಗದಿಂದ ನಮಗೆ ಸುಖವಾಗುತ್ತದೆ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಅದನ್ನೇ ಜೀವನ್ಮುಕ್ತಿ ಎನ್ನುತ್ತಾರೆ. 

‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ

ದುರ್ಜನರ ಸಂಗದೊಡನಾಟ ಬಚ್ಚಲಿನ

ರೊಚ್ಚಿನಂತಿಹುದು ಸರ್ವಜ್ಞ’ 

ಆದುದರಿಂದ ಅಂಥವರ ದುರ್ಜನರ ಸಂಗದಿಂದ ದೂರವಿರಲು ಬೋಧಿಸಿದ ಅನೇಕರಲ್ಲಿ ತೆಲುಗು ಮಹಾಯೋಗಿ ವೇಮನ, ಕನ್ನಡದ ಸರ್ವವನ್ನು ಬಲ್ಲ ಸರ್ವಜ್ಞರು ಪ್ರಮುಖರಾಗಿದ್ದಾರೆ. 

ಒಮ್ಮೆ ನಾವು ಕಲಿತ ವಿದ್ಯೆ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದರಲ್ಲಿ ಸಹೋದರರು, ಕಳ್ಳರು, ಅರಸರು ಪಾಲು ಬೇಡುವುದಿಲ್ಲ ಎಂದು ವಿದ್ಯೆಯ ಮಹತ್ವವನ್ನು ತಿಳಿಸುತ್ತಾ, “ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು” ಎಂದು ತಿಳಿಸುವುದರ ಮೂಲಕ ಮಕ್ಕಳಿಗೆ ವಿದ್ಯೆ ಕಲಿಸುವುದೇ ತಂದೆ ತಾಯಿಯರ ಮೊದಲ ಕರ್ತವ್ಯವೆಂದು ಅರುಹಿದ್ದಾನೆ. 

ಸರ್ವಜ್ಞನ ವಚನಗಳಲ್ಲಿ ಮಹಾಕಾವ್ಯಗಳಲ್ಲಿರುವ ಕೆಲವು ಅಲಂಕಾರಗಳಿವೆ. ಅವುಗಳಲ್ಲಿ ರೂಪಕ, ಯಮಕ, ಉಪಮೆ, ದೃಷ್ಟಾಂತ, ಶ್ಲೇಷ ಇವುಗಳು ಮುಖ್ಯವಾಗಿವೆ. ಅಲ್ಲದೇ ಶೃಂಗಾರ, ಭೀಬತ್ಸ, ಅದ್ಭುತ ರಸಗಳಿದ್ದರೂ, ಹಾಸ್ಯ ರಸವೇ ಈತನ ವಚನಗಳಲ್ಲಿ ಮುಖ್ಯವಾಗಿವೆ. ಅವನು ತನ್ನ ಮನಸ್ಸಿಗೆ ಬಂದ ಯೋಚನೆಯನ್ನು ಯೋಗ್ಯ ಶಬ್ದಗಳಿಂದ ಉಚಿತವಾದ ರೀತಿಯಲ್ಲಿ ಧಾರಾಳವಾಗಿ ಹೇಳಲು ಸಮರ್ಥನಾಗಿದ್ದಾನೆ. ಈ ವಿಚಾರದಲ್ಲಿ ಸರ್ವಜ್ಞನು ಯಾವ ಮಹಾಕವಿಗೂ ಕಡಿಮೆಯಾದವನಲ್ಲವೆಂದು ಅವನ ಹೃದಯವನ್ನು ಬಲ್ಲವರೆಲ್ಲರೂ ಒಪ್ಪಲೇಬೇಕು. ಹೀಗೆ ಸರ್ವಜ್ಞನ ವಚನಗಳು ಓದುವವರಿಗೆ ಶಕ್ತಿ ವರ್ಧಕಗಳಂತೆ ಕಾರ್ಯ ನಿರ್ವಹಿಸುತ್ತವೆ. ಅಷ್ಟು ಮೌಲಿಕ ಸಿರಿ ಸಂಪತ್ತಿನ ಗಣಿಯೇ ಈತನ ವಚನಗಳಾಗಿವೆ. ಇವು ಕನ್ನಡ ಸಾಹಿತ್ಯ ಲೋಕಕ್ಕೆ ತವನಿಧಿ, ನೆಲದ ಮರೆಯ ನಿಧಾನವಿದ್ದಂತೆ ಎಂದೆನ್ನಬಹುದು, ಸರ್ವಜ್ಞರಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಬದುಕಿನ ಸಹಸ್ರ ಮುಖಗಳನ್ನು ಹತ್ತಿರದಿಂದ ಕಂಡ ಸರ್ವಜ್ಞ, ತನ್ನ ವಚನಗಳಲ್ಲಿ ಅವುಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ. ಆತ ನೀಡಿರುವ ಒಂದೊಂದು ವಚನವೂ ಜೀವಂತ ಕಾವ್ಯವಾಗಿದೆ. 

ತೆಲುಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ಚಿಂತಕ ವೇಮನ ಚೌಪದಿಗಳಲ್ಲಿ ಸಹಜವೆಂಬಂತೆ ಸಹಸ್ರಗಟ್ಟಲೇ ರಚಿಸಿದ ಮಹಾಕವಿ. ಆತನ ಎಲ್ಲಾ ಪದ್ಯಗಳು ಮಹೋನ್ನತ ಗುಣವನ್ನು ಹೊಂದಿವೆ. ಪಂಡಿತರೂ ಮೆಚ್ಚಿ ಅಹುದಹುದು ಎನ್ನುವಂತಿವೆ. ಜನಸಾಮಾನ್ಯರಂತೂ ತಲೆದೂಗುವಂತಿವೆ. ಆಡು ಮುಟ್ಟದ ಸೊಪ್ಪಿಲ್ಲ, ವೇಮನ ರಚಿಸಲಾರದ ವಿಷಯಗಳೇ ಉಳಿದಿಲ್ಲವೆಂದು ಹೇಳಲು ಅಡ್ಡಿಯಿಲ್ಲ. ಕೃಷಿ, ಕಾಯಕ, ದಾನ, ಧರ್ಮ, ಅರ್ಥ, ಕಾಮ, ಮೋಕ್ಷ, ಸಜ್ಜನರ ಸಂಗ, ಸತ್ಸಂಗ, ಧ್ಯಾನ, ಯೋಗ, ಅಜ್ಞಾನ, ಗುರು-ಶಿಷ್ಯ, ಬಂಧು-ಬಳಗ, ಜಾತಿ-ವಿಜಾತಿ, ಸಂಸಾರ ಕಲಹ, ಮೋಕ್ಷ ಮಾರ್ಗ, ಗುರು ಶಿಷ್ಯರ ಸಂಬಂಧ, ಸ್ವರ್ಗ, ನರಕ ಈ ಮುಂತಾದ ವಿಷಯಗಳ ಕುರಿತಾಗಿ ಮೇಮನರು ತಮ್ಮ ಪದ್ಯಗಳಲ್ಲಿ ನಿರೂಪಿಸಿದ್ದಾರೆ. 

ಜ್ಞಾನೋದಯವಾದ ನಂತರ ತನ್ನವರನ್ನೆಲ್ಲ ತೊರೆದು, ದಾರಿ ತಪ್ಪಿ ನಡೆಯುವವರನ್ನು ಸನ್ಮಾರ್ಗದ ಮೇಲೆ ಮುನ್ನಡೆಸಿದ ಕೀರ್ತಿ ವೇಮನರದು. ಸಾಧ್ವಿ ಶಿರೋಮಣಿಯಂತಹ ಪತ್ನಿ ಇದ್ದರೆ ಅದೇ ಸ್ವರ್ಗ ಸುಖ, ಸ್ವರ್ಗವೆಂಬುದು ಬೇರಿಲ್ಲ ಕಾಣಿರೋ ಎಂದಿದ್ದಾನೆ. ಶೀಲವಿಲ್ಲದ ಹೆಂಡತಿಯ ಸಹವಾಸ ಯಮದೂತನ ಸಖ್ಯ ಮಾಡಿದಂತೆ ಎಂದುದ್ದಾಗಿ ಪದ್ಯದಲ್ಲಿ ಹೇಳಿ ಆತಂಕ ಪಟ್ಟಿದ್ದಾನೆ. ತೀರ್ಥಯಾತ್ರೆ ಮಾಡುವವ, ಗುಡಿ-ಗುಂಡಾರಗಳನ್ನು ಸುತ್ತುವವರನ್ನು ಕಂಡು ಹೇಳಿದ ವೇಮನರ ಪದಗಳು ನಮಗೆ ದಾರಿ ದೀಪದಂತಿವೆ. ಅವುಗಳನ್ನು ಅರಿತು ಆಚರಿಸಿದವರ ಬಾಳು ಸ್ವರ್ಗ ಸುಖವಾಗುತ್ತದೆ. ಇಲ್ಲದಿರೆ ನರಕ ಯಾತನೆಯೇ ಗತಿ ಎಂದಿದ್ದಾನೆ.

‘ದೇವ ಗುಡಿಗಳಲ್ಲಿ ತೀರ್ಥ ಕ್ಷೇತ್ರದಲ್ಲಿ 

ಮೂಲವರಿಯದಿರಲು ಮುಕ್ತಿಯಿಲ್ಲ

ಆತ್ಮ ಮೂಲವನರಿಯದೆ, ಅದನೆಂತು ತಿಳಿವನು?

ವಿಶ್ವದಾಭಿರಾಮ ಕೇಳು ವೇಮ’

ಶಿವನು ಶಿಲೆಯಲ್ಲಿಲ್ಲ, ಕಲ್ಲು ಕಟ್ಟಿಗೆಯ ಮೂರ್ತಿಗಳಲಿಲ್ಲ, ಗುಡಿ-ಗುಂಡಾರಗಳಲ್ಲಿಯೂ ಇಲ್ಲ; ಅವನಿರುವುದು ಜೀವಿಗಳಲ್ಲಿ ಸಕಲ ಚರಾಚರ ಪ್ರಾಣಿ-ಪಕ್ಷಿ-ಕೀಟಾದಿಗಳಲ್ಲಿ, ದೀನ ದಲಿತ ಅನಾಥರಲ್ಲಿರುವನು. ಅವರಿಗೆ ಅನ್ನ-ಜ್ಞಾನ ದಾಸೋಹವನ್ನು ಮನಃಪೂರ್ವಕವಾಗಿ ಮಾಡಿದ್ದೇಯಾದರೆ, ಅದು ದೇವರಿಗೆ ಸಲ್ಲುತ್ತದೆ ಎಂಬ ಉದಾತ್ತ ನೀತಿಯ ಮಾತನಾಡಿದ್ದಾರೆ ವೇಮನ.

ಮೈಲಾರ ಸುತ್ತಿ ದಣಿಯುವುದಕ್ಕಿಂತ ಮನೆಯೊಳಿರುವ ಹೆತ್ತ ತಂದೆ-ತಾಯಿ, ಗುರು ಹಿರಿಯರನ್ನು ಮನಃಪೂರ್ವಕವಾಗಿ ಸೇವೆ ಮಾಡುವುದರಿಂದ ದೇವರಿಗೆ ಸಲ್ಲುತ್ತದೆ. ಕಾಶಿ ರಾಮೇಶ್ವರಕ್ಕೆ ಹೋಗುವುದಕ್ಕಿಂತ ಮನೆಯಲ್ಲಿರುವ ತಂದೆ-ತಾಯಿಗಳೇ ಕಾಶಿ ರಾಮೇಶ್ವರವಿದ್ದಂತೆ ಎಂದುದಾಗಿ ಕೆಲವು ಪದ್ಯಗಳ ಮೂಲಕ ವೇಮನ ಹೇಳಿರುವರು.

‘ತಾಯಿ-ತಂದೆಯರೇ ತನಗೆ ಗುರುವು ದೈವ

ತಾಯಿ-ತಂದೆಯರೇ ತನಗೆ ಜೋಡು

ತಾಯಿ-ತಂದೆಯಿಂದ ತನುವು ಆಯಿತಲ್ಲ

ವಿಶ್ವದಾಭಿರಾಮ ಕೇಳು ವೇಮ’

ತಾಯಿ-ತಂದೆಗಳಲ್ಲಿಯೇ ದೇವರನ್ನು ಕಾಣು, ಗುರುವನ್ನಾಗಿ ಸ್ವೀಕರಿಸಿ ನಿಮ್ಮ ಬದುಕನ್ನು ಚಿನ್ನವಾಗಿಸಿಕೊಳ್ಳರೆಂದು ಹಿತನುಡಿದ ಬಗೆಯು ಇದರಲ್ಲಿ ಕೆನೆಗಟ್ಟಿದೆ. 

ಈ ಪೃಥ್ವಿಯಲ್ಲಿ ಜನಿಸಿದ ಮನುಜ ಕುಲವೊಂದೇ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೊಳಗೊಂದಾಗಿ ಬದುಕುವುದೇ ಉತ್ತಮರೆಂದ ವೇಮನ. ಅಲ್ಲದೆ ಸಮಾಜದಲ್ಲಿ ಕೆಲವರನ್ನು ಮೇಲಿನವರೆಂದೂ, ಬೇರೆ ಕೆಲವರನ್ನು ಕೆಳಗಿನವರೆಂದು ಮಾಡಿಕೊಂಡಿರುವುದು, ಇದು ನಿಜದ ಅರಿವಲ್ಲ. ತನ್ನ ಗುಣ-ಕರ್ಮಗಳೇ ತನ್ನ ಇರುವಿಗೆ ಕಾರಣವೆಂಬುದನ್ನು ತಿಳಿಯಬೇಕೇ ಹೊರತು, ಮೇಲು-ಕೀಳೂ, ಧನ-ಕನಕ ಅಧಿಕಾರದಿಂದಲ್ಲವೆನ್ನುತ್ತಾರೆ ಸಂತ ವೇಮನ. 

‘ಜಾತಿಯೊಳಗೆ ಮೇಲು ಜಾತಿ ಕೀಳು ಎಲ್ಲಿ?

ನಿಜವರಿಯದೇ ತಿರುಗಲೇನು ಫಲವು?

ಇದನರಿತ ಮನುಜರ ಕುಲವೇ ಮಿಗಿಲು ಕಣಾ

ವಿಶ್ವದಾಭಿರಾಮಕೇಳು ವೇಮ 

ನಾವೆಲ್ಲರೂ ದೇವನ ಆಳುಗಳು ಆತನು ಆಡಿಸುವ ಸೂತ್ರದ ಗೊಂಬೆಗಳಂತೆ, ಆ ದೇವನ ಎದುರಿಗೆ ಎಲ್ಲರೂ ಸರಿ ಸಮಾನರು. ಕುಲದ ಲೆಕ್ಕವೇನೆಂದರೆ ಗುಣವೇ ಪ್ರಧಾನವೆಂದಿದ್ದಾರೆ. ಕವಿ ವೇಮನ.

ಒಳ್ಳೆಯ ಆಚಾರ ವಿಚಾರವಿದ್ದವನೇ ಶೀಲವಂತ, ಶ್ರೇಷ್ಠ ಕುಲವಂತ. ಪರರ ವಸ್ತುವನ್ನು ಮುಟ್ಟಬಾರದು, ನೀತಿಯಿಂದ ನಡೆಯಬೇಕು. ಸುಳ್ಳು ಮಾತನಾಡಬಾರದು, ನಡೆ-ನುಡಿ ಶುದ್ಧವಿರದಿದ್ದರೆ ಆತ ಚಾಂಡಾಲನೇ ಸರಿ ಎಂದಿದ್ದಾನೆ. ಕನ್ನಡಿಯಲ್ಲಿ ಕರಿಯುಕಿರಿದಾಗಿ ಕಂಡರೇನಂತೆ? ಬೇರೆಯವರ ತಪ್ಪನ್ನು ಎಣಿಸುವ ಮುನ್ನ ಸ್ವಂತದ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಹೀಗೆ ವೇಮನ ಯೋಗಿಯು ಬಿತ್ತಿದ ನೀತಿಯ ಮಾತುಗಳು ತೆಲುಗರ ಕನ್ನಡಿಗರ ಮನವನ್ನು ಸೊರೆಗೊಳಿಸಿವೆ. ಸತ್ಯ, ನೀತಿ, ಪ್ರಾಮಾಣಿಕತೆ ಮತ್ತು ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡು ಬದುಕಿರೆಂದು ಜನತೆಗೆ ಹಿತ ನುಡಿದ್ದಾನೆ. ಮಹಾಯೋಗಿ ವೇಮನರು ಭಾರತೀಯ ದಾರ್ಶನಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಂತಕವಿ. ಪರಮ ಜ್ಞಾನ, ಸ್ಥಾಪಿತ ಧರ್ಮ, ಜಾತಿ ಜನಾಂಗ, ದೇಶ, ಭಾಷೆ ಮತ್ತು ವ್ಯಕ್ತಿ ಪ್ರಚಾರದಂತಹ ಮಾನವ ಕಲ್ಪಿತ ವಿಷಯಗಳನ್ನು ಮೀರಿ ಇರುವ ಶಾಂತಿಯನ್ನು ದರ್ಶಿಸಲು ಮಾರ್ಗತೋರಿಸಿದವರು. 

ಒಟ್ಟಿನಲ್ಲಿ ಸಮಾಜ ಸುಧಾರಣೆಗಾಗಿಯೇ ಈ ಲೋಕಕ್ಕೆ ಅವತರಿಸಿದ ಪುಣ್ಯ ಪುರುಷರು. ಇಬ್ಬರಲ್ಲಿಯೂ ಇರುವಿಕೆಯ ಜೀವನದಲ್ಲಿ, ವಿದ್ಯೆ ಸಂಪಾದಿಸುವಲ್ಲಿ, ಲೋಕ ಸಂಚಾರದಲ್ಲಿ, ಸಮಾಜ ಸುಧಾರಿಸುವಲ್ಲಿ ಒಂದೇ ರೀತಿಯಾಗಿದೆ. ಹೀಗೆ ಶೋಧನೆಯ ಆಳಕ್ಕಿಳಿದಾಗ ಈರ್ವರಲ್ಲಿ ಪ್ರಸ್ತುತ ಕಾಲಕ್ಕೆ ಬೇಕಾದ ಮಾರ್ಗದರ್ಶನದ ಮಾಹಿತಿಗಳಿವೆ. ತಪ್ಪು ಹೆಜ್ಜೆಗಳಿಗೆ ಸತ್ಯದ ಗೆಜ್ಜೆಗಳಿವೆ. ‘ಹಾಡು ಹಳೆಯದಾದರೇನು ಭಾವನವನವೀನ’ ಎಂಬ ಜಿ.ಎಸ್. ಶಿವರುದ್ರಪ್ಪನವರ ಕಾವ್ಯವಾಣಿ ಹೇಳುವಂತೆ ಇವರ ಕಾವ್ಯ ಮತ್ತು ವಚನಗಳು ಇಂದು ಮುಂದು ಎಂದೆಂದೂ ಪ್ರಸ್ತುತವೇ. ಅವರಿಬ್ಬರೂ ಲೋಕದೊಳಗಿದ್ದು ಇಲ್ಲದಂತೆ ಬಾಳಿದವರು. ಹೀನ ಗುಣದವರನ್ನು, ದಾನವರನ್ನು ತಿದ್ದಿ ಬುದ್ಧಿ ಹೇಳಿ, ಉತ್ತಮ ಮಾರ್ಗಕ್ಕೆ ತಂದವರು. ಇವರಲ್ಲಿ ಯಾರೂ ಮೇಲೂ ಅಲ್ಲ; ಕೀಳೂ ಅಲ್ಲ, ಸರಿಸಮಾನ ಮನಸ್ಕರು. ಸಮಾಜದಲ್ಲಿಯೂ ಇದನ್ನೇ ಪಸರಿಸಲು ಬಂದವರು. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಸಾಹಿತ್ಯವೂ ಕೂಡಾ ಸಮಾಜ ಮತ್ತು ಧರ್ಮದ ಸುಧಾರಣೆಗಾಗಿ ಕಾಲ ಕಾಲಕ್ಕೆ ಬದಲಾಗುತ್ತಾ ಮುನ್ನಡೆದಿದೆ. 

ಆಕರ ಗ್ರಂಥಗಳು:

  1. ಸರ್ವಜ್ಞನ ವಚನಗಳು-ಸಂ.ರೆ||ಉತ್ತಂಗಿ ಚೆನ್ನಪ್ಪ ಪ್ರಕಾಶ ಸಾಹಿತ್ಯ, ಬೆಂಗಳೂರು - 2016.
  2. ವಿಹಂಗಮ-ಪ್ರಧಾನ ಸಂಪಾದಕರು-ಪ್ರೊ.ಬಿ.ಬಿ.ಡೆಂಗನವರ, ಡಾ. ಆರ್.ವಿ.ಪಾಟೀಲ- ಸೌಮ್ಯ ಪ್ರಕಾಶನ, ವಿಜಯಪೂರ-2018.
  3. ಶಬ್ದದೊಳಗಣ ನಿಶ್ಶಬ್ದ-ಡಾ. ಸುನಿತಾ ಸಿ. ಗುಮ್ಮಾ ಶರಣ ಪ್ರಕಾಶನ ಕಲಬುರ್ಗಿ-2011.
  4. ಮೇಮನ ಮತ್ತು ಸರ್ವಜ್ಞ -ಆರ್.ಬಿ. ಚಿಲುಮೆ ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-2018.

Files

Restricted

The record is publicly accessible, but files are restricted. Log in to check if you have access.

Additional details