Published July 7, 2026 | Version v1

ಡಾ.ಬುದ್ಧಣ್ಣ ಹಿಂಗಮಿರೆ ಅವರ 'ಬುದ್ಧ ಕಾವ್ಯ ದರ್ಶನ' ಮಹಾಕಾವ್ಯದಲ್ಲಿನ ಬೌದ್ಧ ಮಹಿಳೆಯರು

  • 1. ಸಂಶೋಧನಾರ್ಥಿ, ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Description

ಜ್ಞಾನೋದಯ ಪಡೆಯುವ ಸಾಮರ್ಥ್ಯವು ಹುಟ್ಟು, ದೇಹ, ವರ್ಣಗಳಿಂದ ನಿರ್ಧರಿಸಲ್ಪಡುವುದಿಲ್ಲ ಎಂದು ಬುದ್ಧ ತಿಳಿದಿದ್ದ. ತನ್ನ ವಿಚಾರಗಳನ್ನು ತಿಳಿಸುವಲ್ಲಿ ಸ್ತ್ರೀ ಪುರುಷರ ನಡುವೆ ತಾರತಮ್ಯ ಮಾಡಲಿಲ್ಲ. ಧಮ್ಮ ಉಪಾಸನೆಯು ಯಾವುದೇ ಲಿಂಗ ಆದ್ಯತೆ ಹೊಂದಿರಲಿಲ್ಲ. ಧಮ್ಮವು ಎಲ್ಲಾ ಭೇದಗಳನ್ನು ಮೀರಿದ್ದು ಎಂದರಿತ ಜನಸಾಮಾನ್ಯರು, ಮಹಿಳೆಯರು ಉಪಾಸಕ, ಉಪಾಸಿಕೆಯರಾದರು. ಮಾರ್ಗಾನುಯಾಯಿ ಸಮಣ, ಸಮಣೆಯರಾದರು. ಭಿಕ್ಕುಗಳ ಸಂಘ ಸ್ಥಾಪನೆಯಾದ ಐದು ವರ್ಷಗಳ ನಂತರ ಭಿಕ್ಕುಣಿಯರ ಸಂಘ ಆರಂಭವಾಯಿತು. ಸಮಾಜದಿಂದ ತುಳಿತಕ್ಕೊಳಪಟ್ಟ, ಹೊರದೂಡಲ್ಪಟ್ಟ, ಅಲಕ್ಷಿಸಲ್ಪಟ್ಟ, ನಿಷೇಧಿಸಲ್ಪಟ್ಟ ಮತ್ತು ದೂರೀಕರಿಸಲ್ಪಟ್ಟ ಜೀವ ಸಂಕುಲದ ಏಳಿಗೆಗಾಗಿ ಸದಾಕಾಲವೂ ಶ್ರಮಿಸಿದಂತಹ ಮಹಾಪುರುಷನೆಂದರೆ ಗೌತಮ ಬುದ್ಧ. ವೇದಗಳು, ಉಪನಿಷತ್ತುಗಳು, ಧರ್ಮಗ್ರಂಥಗಳಲ್ಲಿ ‘ಸ್ತ್ರೀ’ ಎಂಬುವವಳು ಸ್ವಾತಂತ್ರ್ಯಕ್ಕೆ ಅನರ್ಹಳು ಎಂಬಂತೆ ಬಿಂಬಿತವಾಗಿರುವುದು ಪರಂಪರೆಯುದ್ದಕ್ಕೂ ಕಾಣಸಿಗುತ್ತದೆ. ಭಾರತೀಯ ಕಾಲಮಾನದೊಳಗೆ ಎರಡನೇ ದರ್ಜೆಯ ಪ್ರಜೆಯೆಂದು ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಬುದ್ಧ ಸ್ವಾತಂತ್ರ್ಯಕ್ಕೆ ಅನರ್ಹಳಾದ ಮತ್ತು ಎರಡನೇ ದರ್ಜೆಯ ಪ್ರಜೆಯಾದ ‘ಸ್ತ್ರೀ’ಯೂ ಸಹ ಪುರುಷನಂತೆ ಎಲ್ಲಕ್ಕೂ ಅರ್ಹಳೆಂದೂ ಹಾಗೂ ಸಮಾನಳೆಂದು ಸಾರಿದವನು.

“ಕ್ರಿ.ಪೂ. 6ನೆಯ ಶತಮಾನ ರಾಜಕೀಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಂಬಾ ಸಂಕೀರ್ಣವಾದ ಕಾಲ. ಕೃಷಿ ಸಾಕಷ್ಟು ಚೆನ್ನಾಗಿತ್ತು. ಗಂಗಾ ಬಯಲಿನ ಸುತ್ತಮುತ್ತ ಹಲವು ಪ್ರಮುಖ ನಗರಗಳು ತಲೆಯೆತ್ತಿದ್ದವು. ನಗರಗಳು ಬೆಳೆದಂತೆ ವ್ಯಾಪಾರ ಮತ್ತು ವಾಣಿಜ್ಯ ಬೆಳೆಯಲಾರಂಭಿಸಿದವು. ಇದರ ಪರಿಣಾಮವಾಗಿ ಸಮಾಜದ ಉಳಿದ ಹಲವು ವರ್ಗಗಳು ಪ್ರಬಲವಾಗಲಾರಂಭಿಸಿದವು. ಅದೇ ಹೊತ್ತಿನಲ್ಲಿ ವೈದಿಕ ಚಿಂತನೆಗೆ ಪರ್ಯಾಯವಾದ ಹಲವು ಚಿಂತನಾ ಕ್ರಮಗಳು ಬೆಳೆಯತೊಡಗಿದವು. ಸಾಮಾಜಿಕ ಶ್ರೇಣಿಕರಣ ಹೆಚ್ಚಾಗಿಯೇ ಇತ್ತು. ಆ ಕಾಲಘಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಬೌದ್ಧ ಧರ್ಮವೂ ಸೇರಿದಂತೆ ಎಲ್ಲಾ ಧರ್ಮಗಳು ಮತ್ತು ತಾತ್ವಿಕ ಚಿಂತನೆಗಳು ಈ ಸಂಕೀರ್ಣ ಕಾಲಘಟ್ಟದ ಜೊತೆ ವಿಭಿನ್ನ ರೀತಿಯಲ್ಲಿ ಒಡನಾಡಿದವು. ಅವು ಪರಿತ್ಯಾಗಿಗಳಿಗೆ ಇನ್ನೊಂದು ಪರ್ಯಾಯ ವಿಶ್ವವನ್ನು ಸೃಷ್ಟಿಸಲು ಪ್ರಯತ್ನಿಸಿದವು.”

ಬುದ್ಧ ಮಾನವ ಸಮಾನತೆ, ಕರುಣೆ ಮತ್ತು ಅಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಬೋಧನೆಯನ್ನು ಮಾಡಿದನು. ಬೌದ್ಧ ಸಂಘಗಳಲ್ಲಿ ಮಹಿಳೆಯರಿಗೂ ಪುರುಷರಂತೆ ಆಧ್ಯಾತ್ಮಿಕ ಮುಕ್ತಿ ದೊರೆಯಬಹುದೆಂಬ ಮಹತ್ವದ ತತ್ವವನ್ನು ಪ್ರತಿಪಾದಿಸಿದನು. ಇದು ಆ ಕಾಲದ ಪರಿಸ್ಥಿತಿಯಲ್ಲಿ ಕ್ರಾಂತಿಕಾರಿ ಅಥವಾ ಪ್ರಗತಿಪರ ಚಿಂತನೆಯಾಗಿತ್ತು. ಮಹಿಳೆಯರಿಗೂ ಧಮ್ಮಾಚರಣೆ ಮತ್ತು ನಿರ್ವಾಣ ಸಾಧನೆಗೆ ಅವಕಾಶ ನೀಡಿದನು. ಮಹಿಳೆಯರು ಜ್ಞಾನ, ಧ್ಯಾನ ಮತ್ತು ನೈತಿಕ ಜೀವನದ ಮೂಲಕ ಉನ್ನತ ಸ್ಥಿತಿಯನ್ನು ತಲುಪಬಹುದೆಂದು ಸಾರಿರುವುದನ್ನು ನೋಡಬಹುದು. ಕೆಲವು ಭಿಕ್ಷುಣಿಯರು ಸಂಘ ಜೀವನವನ್ನು ನಡೆಸಿದರೆ, ಇನ್ನೂ ಕೆಲವರು ಗೃಹಸ್ಥ ಜೀವನದಲ್ಲೇ ಧಮ್ಮವನ್ನು ಅನುಸರಿಸಿದರು.

ಬೌದ್ಧಧರ್ಮದ ಆರಂಭದ ಕಾಲದಲ್ಲಿನ ಭಿಕ್ಕುಣಿಯರ ಬದುಕಿನ ಬಗ್ಗೆ ಮಹತ್ವದ ಮಾಹಿತಿಗಳು ನಮಗೆ ಬೌದ್ಧ ವಾಙ್ಮಯದಲ್ಲಿ ದೊರಕುತ್ತವೆ. ಬೌದ್ಧ ವಾಙ್ಮಯ ಎಂದರೆ ಪವಿತ್ರ ವಿನಯ ಗ್ರಂಥಗಳು. ಜೈನ ಶ್ರಮಣ ಪರಂಪರೆಯಲ್ಲಿಯೂ ಜೈನ ಸನ್ಯಾಸಿನಿಯರಿಗೆ ಬೌದ್ಧ ಭಿಕ್ಕುಣಿಯರಿಗೆ ಇರುವಷ್ಟೇ ಸ್ವಾತಂತ್ರ್ಯ ಇತ್ತು ಎಂದು ಹೇಳಲಾಗುತ್ತದೆ. ಇದು ಬೌದ್ಧ ಭಿಕ್ಕುಣಿ ಪರಂಪರೆಗಿಂತಲೂ ಹಳೆಯದು. ಭಿಕ್ಕುಣಿ ಪರಂಪರೆಯನ್ನು ಆರಂಭಿಸಿದವರಲ್ಲಿ ಮೊದಲಿಗರು ಜೈನರು. ಆದರೆ ಕುಟುಂಬ ವ್ಯವಸ್ಥೆಯಿಂದ ಹೊರಗೆ ದೊಡ್ಡ ಪ್ರಮಾಣದಲ್ಲಿ ವಾಸಿಸುವ ಹೆಂಗಸರ ಬದುಕು, ಎದುರಿಸುವ ಸವಾಲುಗಳನ್ನು ಕುರಿತು ಬೌದ್ಧ ಗ್ರಂಥಗಳಲ್ಲಿ ವಿಸ್ತೃತವಾಗಿ ದೊರಕುವುದರಿಂದ ಅನಿವಾರ್ಯವಾಗಿ ಹೊರಳುವಂತಾಗುತ್ತದೆ. ಬೌದ್ಧಗ್ರಂಥಗಳ ಚರ್ಚೆಗಳಲ್ಲಿ ದಾಖಲಾಗಿರುವಂತೆ; ಹೆಣ್ಣಿನ ಮನಸ್ಸಿನಿಂದಲೇ ಮೂಡಬಹುದಾದ ಹಲವು ಪ್ರಶ್ನೆಗಳ ಜೊತೆಗೆ ಬುದ್ಧ ಮುಖಾಮುಖಿಯಾಗುವುದು ಕಾಣುತ್ತದೆ.

“ಅತ್ಯಂತ ದೀರ್ಘಕಾಲ ಭಿಕ್ಕುಣಿಯಾಗಿದ್ದು ರಾಜರು, ಸಾಮಾನ್ಯ ಜನರ ಗೌರವಕ್ಕೆ ಪಾತ್ರಳಾಗಿರುವವಳು ಮಹಾಪ್ರಜಾಪತಿ ಗೌತಮಿ. ಅತ್ಯಂತ ಜ್ಞಾನಿ ಹಾಗೂ ಅರಿವುಳ್ಳ ಭಿಕ್ಕುಣಿ ಖೇಮಾ, ಅತಿಮಾನುಷ ಶಕ್ತಿಗಳನ್ನು ಹೊಂದಿ ದಿವ್ಯಶಕ್ತಿಗಳನ್ನು ಬರಮಾಡಿಕೊಳ್ಳಬಲ್ಲ ಭಿಕ್ಕುಣಿ ಉಪ್ಪಲವಣ್ಣಾ, ತಪಸ್ಸಿನ ಹನ್ನೊಂದು ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸುವ ಭಿಕ್ಕುಣಿ ಕಿಸಾಗೋತಮಿ. ದಿವ್ಯದೃಷ್ಟಿಯನ್ನು ಹೊಂದಿರುವವಳು ಸಕುಲಾ, ಮನಸ್ಸು ಸ್ವಲ್ಪವೂ ವಿಚಲಿತವಾಗದಂತೆ ಧ್ಯಾನಮಗ್ನಳಾಗುವ ಭಿಕ್ಕುಣಿ ಸಾಮಾ, ಅರ್ಥವನ್ನು ಸೂಕ್ತವಾಗಿ ವಿಶ್ಲೇಷಿಸಿ, ಧಮ್ಮ ಮಾರ್ಗವನ್ನು ಬೋಧನೆಯ ಮೂಲಕ ಬೆಳೆಸುತ್ತಿರುವವಳು ಪದುಮರಂಜನಾ, ಶಿಸ್ತನ್ನು ಎಳ್ಳಷ್ಟೂ ಉಲ್ಲಂಘಿಸದೆ ಅತ್ಯಂತ ಗೌರವಪೂರ್ವಕವಾಗಿ ಎತ್ತಿ ಹಿಡಿಯುವವಳು ಪಟಾಚಾರಾ, ತನ್ನ ಅಚಲವಾದ ನಂಬುಗೆಯಿಂದಲೇ ನಿಬ್ಬಾಣವನ್ನು ಸಾಧಿಸಿಕೊಂಡವಳು ಬದ್ಧಕಚ್ಚಾನಾ, ಪೂರ್ವಜನ್ಮಗಳ ಸಂಪೂರ್ಣ ಜ್ಞಾನವುಳ್ಳವಳು ಬದ್ಧಕಾಪಿಲಾನಿ, ಜನಸಾಮಾನ್ಯರನ್ನು ಸರಿಯಾದ ಬೋಧನೆಯ ಮೂಲಕ ಧಮ್ಮ ಮಾರ್ಗಕ್ಕೆ ಕರೆತರುತ್ತಿರುವವಳು ಸೋನಾ, ಧಮ್ಮದ ಅರ್ಥವನ್ನು ಅದರ ವಿಭಿನ್ನ ವಿಚಾರಗಳನ್ನು ಕುರಿತು ಚರ್ಚಿಸಬಲ್ಲ ಮತ್ತು ಸರಿಯಾಗಿ ಬೋಧಿಸಬಲ್ಲ ಶಕ್ತಿ ಇರುವವಳು ಧಮ್ಮದಿನ್ನಾ.” ಹೀಗೆ ಪ್ರತಿಯೊಬ್ಬರ ಸಾಮರ್ಥ್ಯವನ್ನು ಕುರಿತು ಮೆಚ್ಚುಗೆ ಮಾತುಗಳನ್ನು ಬುದ್ಧ ಆಡುತ್ತಾನೆ.

ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಡಾ.ಬುದ್ಧಣ್ಣ ಹಿಂಗಮಿರೆ ಅವರು ಬುದ್ಧನ ಕುರಿತು ರಚಿಸಿರುವಂತಹ ಕನ್ನಡ ಮಹಾಕಾವ್ಯಗಳಲ್ಲೊಂದಾದ ‘ಬುದ್ಧ ಕಾವ್ಯ ದರ್ಶನ’ದಲ್ಲಿನ ಬೌದ್ಧ ಮಹಿಳೆಯರ ಅವಲೋಕನವನ್ನು ಇಲ್ಲಿ ಮಾಡಲಾಗುವುದು. ಬುದ್ಧ ಮಾನವ ಸಮಾನತೆ, ಕರುಣೆ ಮತ್ತು ಅಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಬೋಧನೆಯನ್ನು ಮಾಡಿದನು. ಬೌದ್ಧ ಸಂಘಗಳಲ್ಲಿ ಮಹಿಳೆಯರಿಗೂ ಪುರುಷರಂತೆ ಆಧ್ಯಾತ್ಮಿಕ ಮುಕ್ತಿ ದೊರೆಯಬಹುದೆಂಬ ಮಹತ್ವದ ತತ್ವವನ್ನು ಪ್ರತಿಪಾದಿಸಿದನು. ಇದು ಆ ಕಾಲದ ಪರಿಸ್ಥಿತಿಯಲ್ಲಿ ಕ್ರಾಂತಿಕಾರಿ ಅಥವಾ ಪ್ರಗತಿಪರ ಚಿಂತನೆಯಾಗಿತ್ತು ಎಂದೇ ಹೇಳಬಹುದಾಗಿದೆ. ಮಹಿಳೆಯರಿಗೂ ಧಮ್ಮಾಚರಣೆ ಮತ್ತು ನಿರ್ವಾಣ ಸಾಧನೆಗೆ ಅವಕಾಶ ನೀಡಿದನು. ಮಹಿಳೆಯರು ಜ್ಞಾನ, ಧ್ಯಾನ ಮತ್ತು ನೈತಿಕ ಜೀವನದ ಮೂಲಕ ಉನ್ನತ ಸ್ಥಿತಿಯನ್ನು ತಲುಪಬಹುದು ಎಂದು ಬುದ್ಧ ಸಾರಿದನು. ಕೆಲವು ಭಿಕ್ಷುಣಿಯರು ಸಂಘ ಜೀವನವನ್ನು ನಡೆಸಿದರೆ, ಇನ್ನೂ ಕೆಲವರು ಗೃಹಸ್ಥ ಜೀವನದಲ್ಲೇ ಧಮ್ಮವನ್ನು ಅನುಸರಿಸಿದರು. ಆದರೆ, ಮೊದಮೊದಲಿಗೆ ಮಹಿಳೆಯರಿಗೆ ಸಂಘಗಳಲ್ಲಿ ಪ್ರವೇಶವನ್ನು ಬುದ್ಧನು ನಿರಾಕರಿಸಿದ್ದನು. ತದನಂತರದಲ್ಲಿ ಮಹಿಳೆಯರಿಗೂ ಸಂಘವನ್ನು ಸೇರಲು ಅವಕಾಶವನ್ನು ಕಲ್ಪಿಸಿಕೊಟ್ಟನು.

ಸುಜಾತೆ ಸಿದ್ಧಾರ್ಥನು ಬುದ್ಧನಾಗುವ ಮೊದಲು ಅಥವಾ ಬುದ್ಧನಾಗುವ ಪೂರ್ವದಲ್ಲಿ ಒಮ್ಮೆ ಬೋಧಿವೃಕ್ಷದ ಕೆಳಗೆ ತಪಸ್ಸನ್ನಾಚರಿಸುವಾಗ, “ಉಪವಾಸ ಬಳಲುತಿರಲು ಸುಜಾತೆ ಬಂದಳಲ್ಲಿ ದೇಹದಂಡಿಸುತ ಸೊರಗಿ ಕುಳಿತವಗೆ ಹಾಲು ಕುಡಿಸುತಿರಲು; ಸುಜಾತೆ ಕುಡಿಸಿದ ಹಾಲ ಕುಡಿದು ಎಚ್ಚರಿಕೆ ಬಂತವನಿಗೆ ತಪಸ್ಸಿಗ್ಯಾವುದೆ ಅರ್ಥವಿಲ್ಲವೆಂದೆನಿಸಿತು ಅವನಿಗಾಗ”

ಬಹುಶಃ ಕಠಿಣ ತಪಸ್ಸಿನ ಆಚರಣೆಯಿಂದ ಸೊರಗಿಹೋಗಿದ್ದ ಸಿದ್ಧಾರ್ಥನ ದೇಹಕ್ಕೆ ಸುಜಾತೆಯು ಹಾಲನ್ನು ನೀಡುವ ಈ ಸನ್ನಿವೇಶ ಸಿದ್ಧಾರ್ಥ ಬುದ್ಧನಾಗುವ ನಡುವಿನ ಪಯಣದಲ್ಲಿ ಪ್ರಮುಖವಾದಂತಹ ಘಟ್ಟವಾಗಿದೆ. ಏಕೆಂದರೆ, ಸಿದ್ಧಾರ್ಥನಿಗೆ ಸುಜಾತೆಯೆಂಬ ಹೆಣ್ಣು ಮಗಳು ಆಹಾರವಿಲ್ಲದೇ ಸೊರಗಿದ ದೇಹಕ್ಕೆ ಹಾಲನ್ನು ನೀಡದೇ ಹೋಗಿದ್ದರೇ! ಸಿದ್ದಾರ್ಥನಿಗೆ ಹಸಿವಿನ ಅರಿವಾಗುತ್ತಿರಲಿಲ್ಲವೆನೋ ಎಂದನ್ನಿಸುವುದು. ಅನ್ನಪಾನಾದಿಗಳನ್ನು ಬಿಟ್ಟು ಮೌಢ್ಯದಿಂದ ಜ್ಞಾನಸಾಧನೆ ಮಾಡುವ ಹಾದಿಯ ನಡುವಲ್ಲೇ ದೇಹದಿಂದ ಪ್ರಾಣ ಬಿಡುವ ಸಂಭವವೂ ಬಾರದೇ ಇರಲಾದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯವೇನೆಂದರೆ ಸಿದ್ಧಾರ್ಥ ಜ್ಞಾನಿಯಾಗಿ ಬುದ್ಧನಾಗುವಲ್ಲಿ ‘ಸುಜಾತೆ’ಯೆಂಬ ಮಹಿಳೆಯ ಪಾತ್ರವೂ ಸಹ ಬಹಳ ಮುಖ್ಯವಾಗುತ್ತದೆ. ಈ ಹೆಣ್ಣುಮಗಳು ಅನ್ನಪಾನಾದಿಗಳಿಲ್ಲದೇ ಕುಂದುಹೋಗಿದ್ದ ತಪಸ್ಸಿನಲ್ಲಿ ತೊಡಗಿದ್ದ ಸಿದ್ಧಾರ್ಥನನ್ನು ಗಮನಿಸಿ ದೇಹಕ್ಕೆ ಹಾಲನ್ನಿತ್ತು ಹಸಿವನ್ನು ನೀಗಿಸದೇ ಇದ್ದರೆ, ಸಿದ್ಧಾರ್ಥನಿಗೆ ಹಸಿವಿನ ಬಗೆಗೆ ಅರಿವು ಮೂಡುತ್ತಿರಲಿಲ್ಲವೆನೋ?; ಕೊನೆಗೊಂದು ದಿನ ಜ್ಞಾನೋದಯವಾಗದೇ ಸಾಯುತ್ತಲಿದ್ದನೇನೋ ಎಂಬ ಸಂಶಯವೊಂದು ಮೂಡುತ್ತದೆ. ಹಸಿವಿನ ಅರಿವನ್ನು ಮೂಡಿಸುವಲ್ಲಿ ಈಕೆಯ ಪಾತ್ರ ಬಹಳ ಗಣನೀಯವಾದುದು ಎಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿಯುತ್ತದೆ.

ಸುಜಾತೆಯೂ ಪಿಪ್ಪಳ ವೃಕ್ಷದ ಕೆಳಗೆ ಕುಳಿತ ನಿತ್ಯಧ್ಯಾನದಲ್ಲಿ ಇರುವಾಗಲೊಮ್ಮೆ ಆಕೆಯು ಹಾಲನ್ನು ತಂದು ಕೊಡುತ್ತಾಳೆ. ಕೊಟ್ಟು ತಾನು ಬುದ್ಧನ ಬಳಿಗೆ ಹೋಗದೇ ದೂರದಲ್ಲಿ ನಿಲ್ಲುವಳು ಹಾಗೆಯೇ ಬುದ್ಧನು ಹತ್ತಿರ ಬರಲು ಹೇಳಿದಾಗ ಅವಳು, “ತಾನು ಕೆಳಜಾತಿಯವಳು ತನ್ನನ್ನು ಮುಟ್ಟಬೇಡವೆಂದು ಹಿಂಜರಿದು ನಿಂತಿದ್ದಳು ಸುಜಾತೆ ಚಡಪಡಿಸಿ ಮನಸ್ಸಿನಲ್ಲಿ”

ಆಗ ಸಿದ್ಧಾರ್ಥನು ಸುಜಾತೆಗೆ ಹೀಗೆ ಹೇಳುವನು “ನುಡಿವ ನಾಲಗೆಗೆ ಒಳಗಿರುವ ರಕ್ತಕ್ಕೆ ಜಾತಿಯೆನುವುದುಂಟೆ ಜಾತಿ ಪಾತಿಗಳ ಮಾಡಿದವರು ಈ ಮನುಜರಲ್ಲವೇನು?” ಹೀಗೆ ಜಾತಿಯ ಪ್ರಶ್ನೆ ಸುಜಾತೆಗೆ ತನ್ನಲ್ಲಿ ಮೂಡಿದಾಗ ಸಿದ್ಧಾರ್ಥನು ಅದನ್ನು ಪರಿಹರಿಸುವುದನ್ನು ಅವಲೋಕಿಸಿದಾಗ, ಈತನಿಗೆ ಹಸಿವನ್ನು ನೀಗಿಸಿದ ಸುಜಾತೆ ಪ್ರಮುಖಳಾಗುತ್ತಾಳೆಯೇ ಹೊರತು, ಇಲ್ಲಿ ಜಾತಿ ಮುಖ್ಯವೆನಿಸುವುದೇ ಇಲ್ಲವೆಂದು ಈ ಮೇಲಿನ ಪ್ರಶ್ನೆಗಳನ್ನು ಕೇಳುವ ಮುಖೇನ ಜಾತಿಯ ಕುರಿತು ಇರುವ ಅಜ್ಞಾನದ ಅರಿವನ್ನು ಮೂಡಿಸುವನು. ಹಾಗಾಗಿ ಸುಜಾತೆ ಪ್ರಮುಖಳಾಗುತ್ತಾಳೆ. ಸಿದ್ಧಾರ್ಥನು ಜ್ಞಾನೋದಯವನ್ನು ಪಡೆದ ನಂತರದಲ್ಲಿ ಈಕೆಯೂ ಬುದ್ಧನಿಂದ ಉಪದೇಶವನ್ನು ಪಡೆದು ಬೌದ್ಧ ಸಂಘವನ್ನು ಸೇರಿ ಬೌದ್ಧ ಭಿಕ್ಕುಣಿಯಾದಳು.

ಪ್ರಜಾಪತಿ ಗೌತಮಿಯು ಮಹಿಳೆಯರು ಸಂಘವನ್ನು ಪ್ರವೇಶ ಮಾಡಲು ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖವಾದ ಪಾತ್ರವಹಿಸಿದ್ದಳು. ಈಕೆ ಬುದ್ಧನ ತಂದೆ ಶುದ್ಧೋದನನ ಪತ್ನಿ. ಬುದ್ಧನ ತಾಯಿ ಮಹಾಮಾಯಾಳ ತಂಗಿ. ಬುದ್ಧನಿಗೆ ಜನ್ಮವಿತ್ತು ಮಹಾಮಾಯಿ ತೀರಿಹೋದ ಮೇಲೆ ಬುದ್ಧನಿಗೆ ಮೊಲೆಹಾಲನ್ನು ಉಣಿಸಿ, ಪ್ರೀತಿಯಿಂದ ಬೆಳೆಸಿದವಳು ಗೌತಮಿ. ಶುದ್ಧೋದನನು ತೀರಿಹೋದ ಮೇಲೆ ಅವಳಿಗೆ ಅರಮನೆಯ ಐಷಾರಾಮದ ಬದುಕು ಸಾಕೆನಿಸಿ ಅವಳು ಬುದ್ಧನನ್ನು ಕಂಡು ತನಗೂ ದೀಕ್ಷೆ ನೀಡಿ ಸಂಘಕ್ಕೆ ಸೇರಿಸಿಕೊಳ್ಳುವಂತೆ ಹಲವು ಬಾರಿ ಬೇಡಿಕೊಳ್ಳುತ್ತಾಳೆ.

“ಸಂಘಕ್ಕೆ ಸೇರಿಕೊಳುವಂತೆ ಸಂಘದ ವ್ಯವಸ್ಥೆಯಂತೆ ಅವಕಾಶವಿರಲಿಲ್ಲ ಯಾವ ಸ್ತ್ರೀಗೆ ಆಗ ಮಹಾರಾಣಿ ಪ್ರಜಾಪತಿದೇವಿ ಪ್ರಯತ್ನಿಸಿದಳು” ಹೀಗೆ ಮೂರು ಬಾರಿ ಹಠವಿಡಿದು ಬುದ್ಧನನ್ನು ಸಂಘಕ್ಕೆ ಪ್ರವೇಶ ಹಾಗೂ ದೀಕ್ಷೆಯನ್ನು ನೀಡಿ ಎಂದು ಭಿನ್ನೈಸಿಕೊಂಡಾಗ ಮೊದಮೊದಲು ಬುದ್ಧ ನಿರಾಕರಿಸಿದನು. ಹೀಗೆಯೇ ಹಠತೊಟ್ಟು ಪ್ರಜಾಪತಿದೇವಿಯು ಕಪಿಲವಸ್ತುವನ್ನು ಬಿಡುವಾಗ ಕೇಶಮಂಡನವನ್ನು ಮಾಡಿಸಿಕೊಂಡು, ಆಭರಣಗಳೆಲ್ಲವನ್ನು ಕಳಚಿಟ್ಟು, ಭೋಗ, ಐಶ್ವರ್ಯ, ಅಧಿಕಾರ ಎಲ್ಲವನೂ ತ್ಯಜಿಸಿ ಪೀತವಸ್ತ್ರವನ್ನು ಧರಿಸುವಳು. ಆಕೆಗೆ ಮನಶ್ಶಾಂತಿ ಬಿಟ್ಟು ಬೇರೇನೂ ಬೇಕಾಗಿರಲಿಲ್ಲ. ಹೀಗೆ ಎಲ್ಲವನ್ನೂ ತ್ಯಜಿಸಿ ವೈಶಾಲಿಯ ವಿಹಾರದ ಬಳಿ ಬಂದಾಗ, ಅಲ್ಲಿ ಆನಂದ ಅವರನ್ನು ಕಂಡು ಇಲ್ಲಿಯೇ ಏಕೆ ಇರುವಿರಿ ಎಂದು ಮೆಲ್ಲಗೆ ಕೇಳುತ್ತಾನೆ ಆಗ ಪ್ರಜಾಪತಿ ಗೌತಮಿಯು “ಸ್ತ್ರೀಯರಿಗೆ ಅಪ್ಪಣೆ ಇಲ್ಲದ್ದಕ್ಕೆ ಸಂಘದಲಿ ನಿಂತಿರುವೆನೆಂದಳವಳು”. ಆಗ ಬುದ್ಧನ ಬಳಿ ತೆರಳಿ ಸ್ತ್ರೀಯರಿಗೆ ಸಂಘವನ್ನು ಸೇರಲು ಅನುವು ಮಾಡಿಕೊಡಬಹುದಲ್ಲವೆ ಎಂದು ಕೇಳಿದಾಗ; ಬುದ್ಧನು ನಿರಾಕರಿಸಿದನು ಆಗ ಆನಂದನು ಹೀಗೆ ನುಡಿಯುವನು, “ಗಂಡಸಿನಿಂದ ಮಾತ್ರ ಮನುಷ್ಯರು ಹುಟ್ಟುವರೆ ಭೂಮಿ ಮೇಲೆ? ಸ್ತ್ರೀ ಪುರುಷರಿಬ್ಬರಿಂದಲೂ ಹುಟ್ಟುವನು ಮನುಷ್ಯನಾದವನು ಅವಕಾಶ ಕೊಡಬಾರದೆ ಹಾಗಿದ್ದಲ್ಲಿ ಸ್ತ್ರೀಯರಿಗೆ ಎಂದಾಗ” ಆಗ ಬುದ್ಧನು ಸ್ತ್ರೀಯರಿಗೂ ಸಂಘವನ್ನು ಸೇರಲು ಅವಕಾಶವನ್ನು ಮಾಡಿಕೊಟ್ಟನು. ಹಾಗೆ ಭವಿಷ್ಯದ ಕುರಿತು ಯೋಚಿಸುತ್ತಾ ಎಚ್ಚರಿಕೆಯಾಗಿ ಬುದ್ಧ “ಒಪ್ಪಿಗೆಯಿಂದ ಸಂಘದ ಆಯುಷ್ಯ ಅರ್ಧಕ್ಕಿಳಿಯಿತೆಂದ”. ಹೀಗೆ ಸಮಾನತೆಯನ್ನು ಬಯಸುವ ಬುದ್ಧನಿಗೆ ಸ್ತ್ರೀಯರೂ ಸಂಘವನ್ನು ಸೇರಲು ಅರ್ಹರೆಂದು ಅರಿವನ್ನು ಮೂಡಿಸುವ ಪ್ರಸಂಗ ಕುತೂಹಲಕಾರಿಯಾದುದಾಗಿದೆ. ಬಹುಶಃ ಸ್ತ್ರೀಯರಿಗೆ ಸಂಘಕ್ಕೆ ಅವಕಾಶವನ್ನು ಕಲ್ಪಿಸುವಲ್ಲಿ; ಬುದ್ಧನಿಗೆ ತಾನು ಪೂರ್ವದಲ್ಲಿ ತಪಸ್ಸು ಮಾಡುವಾಗ ಸುಜಾತೆಯು ಹಾಲು ಉಣಬಡಿಸಿ ಜೀವ ಉಳಿಸಿರುವ ಸಂಗತಿಯು ನೆನಪಾಗಿರುವ ಸಾಧ್ಯತೆಗಳೂ ಇಲ್ಲಿ ನಮಗೆ ಗೋಚರಿಸದೇ ಇರವು.

ಮಹಿಳೆಯರಿಗೆ ಸಂಘ ಪ್ರವೇಶವನ್ನು ಕಲ್ಪಿಸಿಕೊಡುವಲ್ಲಿ ಪ್ರಜಾಪತಿದೇವಿಯಷ್ಟೇ ಮುಖ್ಯವಾಗಿ ಆನಂದನ ಪಾತ್ರವೂ ನಮಗೆ ಮುಖ್ಯವಾಗಿ ಕಾಣುತ್ತದೆ. ಹೀಗೆ ಮಹಿಳೆಯರಿಗೆ ಸಂಘವನ್ನು ಸೇರಲು ಅವಕಾಶ ಕಲ್ಪಿಸಿಕೊಟ್ಟ ಪರಿಣಾಮ ಹಲವಾರು ಶೋಷಿತ ಸಮುದಾಯದ ಮಹಿಳೆಯರು ಸಮಾನತೆಯನ್ನು ಕಾಣಲು ಹಾಗೂ ಸಮಾಜದಲ್ಲಿ ಎಲ್ಲರಂತೆ ಜೀವಿಸಲೂ ಸಹ ಸಾಧ್ಯವಾಯಿತೆಂದು ಹೇಳಬಹುದು. ಗೌತಮಿಯನ್ನು ಅವಳೊಬ್ಬ ಅಸಾಧಾರಣ ಬೋಧಕಿ ಎಂದು ಬುದ್ಧ ಗುರುತಿಸುತ್ತಾನೆ. ಅವಳು ಹೆಂಗಸರ ಸಮಸ್ಯೆಗಳನ್ನು ಅತ್ಯಂತ ಧೈರ್ಯವಾಗಿ, ಮುಕ್ತವಾಗಿ ಬುದ್ಧನೊಡನೆ ಚರ್ಚಿಸುತ್ತಾಳೆ. ಹೆಂಗಸರ ಮುಟ್ಟಿನ ಸಮಸ್ಯೆ, ದೀಕ್ಷೆ ಕೊಡುವಾಗ ಭಿಕ್ಕುಗಳು ಕೇಳುವ ಪ್ರಶ್ನೆಗಳಿಂದ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುವುದು ಇವುಗಳನ್ನು ಬುದ್ಧನ ಮುಂದಿಟ್ಟು ಪರಿಹಾರ ಹುಡುಕುತ್ತಾಳೆ. ಅವಳು ದೀರ್ಘಕಾಲ ಬದುಕಿ, ಹಲವರ ಬದುಕಿಗೆ ದಾರಿದೀಪವಾಗುತ್ತಾಳೆ.

ವಿಶಾಖೆ ಬುದ್ಧನ ಸ್ತ್ರೀ ಭಿಕ್ಕುಣಿಯರಲ್ಲಿ ಬಹಳ ಪ್ರಮುಖಳು. ರೂಪವತಿಯಾದ, ಉಚ್ಚಕುಲದಲ್ಲಿ ಜನಿಸಿದ ಬಾಲಮಿತ್ರನ ಮಗಳೀಕೆ. ಮಿಗಾರನ ಮಗನ ಮದುವೆಯಾಗಿದ್ದಳು. ಈಕೆ ಬುದ್ಧನ ಉಪದೇಶಗಳಿಗೆ ಮಾರುಹೋಗಿದ್ದಳು. ತನ್ನ ಮಾವ ಬುದ್ಧನನ್ನು ಹೀಯಾಳಿಸುವುದನ್ನು ಒಪ್ಪಲಿಲ್ಲೀಕೆ. ಶ್ರೀಮಂತಿಕೆಯಲ್ಲಿ ಹುಟ್ಟಿದ ಈಕೆ ಯಾವ ಕೊರತೆಗಳು ಇರಲಿಲ್ಲ. ಬುದ್ಧನನ್ನು ತೆಗಳುವುದನ್ನು ಸಹಿಸಲಾರದೆ ತನ್ನ ಮಾವ-ಗಂಡ ಮುಂತಾದವರ ಮನೆಬಿಟ್ಟು ಬಂದಳು. ಆಕೆಯ ಜೊತೆಗೆ “ಅವಳು ತನ್ನ ತಂದೆಯ ಮನೆಯಿಂದ ತಂದ ಐಶ್ವರ್ಯವನ್ನು ತೆಗೆದುಕೊಂಡದ್ದಲ್ಲದೆ ಬೌದ್ಧ ಭಿಕ್ಷುಣಿಯಾಗಿ ಬಂದಿದ್ದಳು; ತಾನು ತಂದಿದ್ದ ದುಡ್ಡು ದ್ರವ್ಯವನ್ನೆಲ್ಲ ಬೌದ್ಧ ಭಿಕ್ಷುಗಳಿಗೆ ಹಂಚಿ ಸಂಸಾರದ ಭಾರ, ಜವಾಬ್ದಾರಿ ಬೇಡವಾಗಿ ಭಿಕ್ಷುಣಿಯಾಗಿದ್ದಳು”

ಹೀಗೆ ಎಲ್ಲವನ್ನೂ ತ್ಯಜಿಸಿ ಮನೆ ಬಿಟ್ಟು ಬಂದಿದ್ದನ್ನು ನೋಡಿದ ತನ್ನ ಮಾವ ಮಿಗಾರ ಆಶ್ಚರ್ಯಚಕಿತನಾಗಿ ಬೌದ್ಧಧರ್ಮಕ್ಕೆ ಶರಣಾಗತನಾಗಿ ಭಿಕ್ಕುವಾಗಲೊಪ್ಪಿದನು. ಇದನ್ನು ಕಂಡ ವಿಶಾಖೆಯೂ ಚಕಿತಳಾದಳು. ಈ ವಿಶಾಖೆಯು ನಮಗಿಲ್ಲಿ ಮುಖ್ಯವೆನಿಸುವುದು ತಾನು ತನ್ನ ಬಳಿಯಿರುವ ಸಂಪತ್ತನ್ನೆಲ್ಲ ತಂದು ಬೌದ್ಧ ಭಿಕ್ಕುಗಳಿಗೆ ಹಂಚುವುದರಿಂದ ಮಾತ್ರವಲ್ಲ. ನೆಮ್ಮದಿಯ ಬದುಕಿಗೆ ಸಂಪತ್ತು ಐಶ್ವರ್ಯ ಮುಖ್ಯವಲ್ಲ ಮನಶ್ಯಾಂತಿ ಮುಖ್ಯವೆಂದು ಸಾರುವುದು. ವಿಶಾಖೆಯ ಮುಖೇನ ಈ ಅರಿವನ್ನು ಲೇಖಕರು ನಿರೂಪಿಸಿರುವುದನ್ನು ಇಂದಿನ ಜಗತ್ತು ಅರಿತು ನಡೆದರೆ, ಸಂಪತ್ತಿನ ವ್ಯಾಮೋಹದಿಂದ ಉಂಟಾಗುವ ಕಲಹಗಳು ಇಲ್ಲವಾಗಿ ಶಾಂತಿಯುತ ಜೀವನವನ್ನು ನಡೆಸಬಹುದು ಎನ್ನುವುದು ನಮಗಿಲ್ಲಿ ಮನವರಿಕೆಯಾಗುತ್ತದೆ.

ಚಾರುದತ್ತೆ ಎಂಬ ಬಹುಸುಂದರವಾದ ವಿಖ್ಯಾತಳಾದ ವೇಶ್ಯೆಯು ಬುದ್ಧನ ಶಿಷ್ಯನಾದ ಉಪಗುಪ್ತನಲ್ಲಿ ಮೋಹಿತಳಾಗಿ ಅವನಲ್ಲಿ ಪ್ರೀತಿಯುಂಟಾಗಿತ್ತವಳಿಗೆ. ಅವನನ್ನು ತನ್ನಲ್ಲಿಗೆ ಬರಲು ಆಹ್ವಾನಿಸಿದ್ದಳು. ಇದನ್ನು ತಿಳಿದ ಉಪಗುಪ್ತನು ನಿರಾಕರಿಸಿದಾಗ ಆಕೆಗೆ ದುಃಖವಾಗಿ ಮತ್ತೊಬ್ಬ ಮಥುರಾದ ಶ್ರೀಮಂತ ವ್ಯಾಪಾರಿಯನ್ನು ಪ್ರೀತಿಸಿದಳು. ಸಂಪತ್ತಿನ ವ್ಯಾಮೋಹದಿಂದ ಆತನನ್ನು ಸಗಣಿಯಲ್ಲಿ ಬಚ್ಚಿಟ್ಟು ಹಲವಾರು ನ್ಯಾಯ, ನಿಂದನೆಗಳನ್ನೂ ಸಹ ಆಕೆ ಎದುರಿಸಬೇಕಾಯಿತು. ನ್ಯಾಯಾಲಯದಲ್ಲಿ ಈಕೆಯ ವಿರುದ್ಧವಾಗಿ ಸಾಕ್ಷಿಗಳೂ ಸಾಬೀತಾಗಿ; ಕೈಕಾಲು ಮೂಗು ಇತ್ಯಾದಿ ಕತ್ತರಿಸಿ ಆಕೆಯನ್ನು ಎಸೆಯಬೇಕೆಂದು ನ್ಯಾಯಾಜ್ಞೆಯಾಯಿತು. ಈಕೆಗೆ ಈ ತೀರ್ಪು ಬರುವ ವೇಳೆಗಾಗಲೇ ಬುದ್ಧನ ಉಪದೇಶಗಳು ಲಭಿಸಿ ಭಿಕ್ಕುಣಿಯಾಗಿದ್ದಳು. ಈಕೆಗೆ ಇಂತಹ ಎಲ್ಲಾ ಕಷ್ಟಗಳನ್ನು ಗೆಲ್ಲಲು ಬುದ್ಧನ ಉಪದೇಶಗಳಿಂದ ಸಾಧ್ಯವಾಯಿತು. “ಸೌಂದರ್ಯ, ಬಂಗಾರ, ಬೆಳ್ಳಿಗಳ ಆಶೆ ಕಳಚಿ ಹೋಗಿತ್ತು; ಸಾಯುವ ಮುಂಚೆ ಅವಳು ಬುದ್ಧನ ಪರಮ ಧರ್ಮ ಸ್ವಿಕರಿಸಿದ್ದಳು ಎಲ್ಲ ಆಶೆಯನ್ನು ಕಳಚಿಕೊಂಡು ಉಸಿರು ಬಿಟ್ಟಿದ್ದಳು ಚಾರುದತ್ತೆ” ಹೀಗೆ ಬುದ್ಧನ ಉಪದೇಶಗಳಿಂದ ಅರಿವನ್ನು ಪಡೆದು ತಾನು ಸಾಯುವ ಮುನ್ನ ಶಿಕ್ಷೆಯನ್ನೊಪ್ಪಿಕೊಂಡು ಭಿಕ್ಷುಣಿಯಾಗಿದ್ದಳಲ್ಲದೆ ಶಾಂತಿಯಿಂದಲೇ ಪ್ರಾಣವನ್ನು ತ್ಯಜಿಸಿದಳು ಚಾರುದತ್ತೆ. ಬುದ್ಧನ ಉಪದೇಶಗಳಿಂದ ವೇಶ್ಯೆಯಾದ ಚಾರುದತ್ತೆಯು ತನಗೆ ಅರಿವಾಗಿ ಸಾಯುವಾಗಲೂ ಆಕೆಯ ಮುಖ ಅರಳಿಯೇ ನಗುನಗುತ್ತಾ ಇತ್ತು ಎಂದು ಲೇಖಕರು ನಿರೂಪಿಸಿರುವುದು ನಮಗಿಲ್ಲಿ ಗಮನಾರ್ಹವಾದ ಸಂಗತಿಯಾಗಿ ಗೋಚರಿಸುತ್ತದೆ ಎಂದರೆ ತಪ್ಪಾಗಲಾರದು. ಕಾಮ, ಲೋಭ, ಮತ್ಸರಗಳಿಗೆ ತಮ್ಮ ಜೀವನವನ್ನು ಹಾಳುಗೆಡವಿಕೊಳ್ಳಬಾರದು; ದೇಹ ಸೌಂದರ್ಯದ ಹಾಗೂ ಸಂಪತ್ತಿನ ವ್ಯಾಮೋಹಕ್ಕೊಳಗಾಗದೇ ಜೀವನವನ್ನು ಸಾಗಿಸಿ ನೆಮ್ಮದಿಯಿಂದ ಬಾಳಬೇಕು ಎಂಬುದನ್ನು ಬುದ್ಧ ಮಹಾಗುರುಗಳು ಹಿಂದಿನ ಕಾಲದಲ್ಲಿಯೇ ನಮಗೆ ಹೇಳಿದ್ದರು. ಈ ಅರಿವು ನಮ್ಮ ಇಂದಿನ ಸಮಾಜದ ಪ್ರಜೆಗಳಿಗೂ ಬಹುಮುಖ್ಯವಾಗಿದೆ ಮತ್ತು ಅವಶ್ಯಕತೆಯೂ ಹೌದು.

ಕ್ಷೇಮಾದೇವಿ ರಾಜಗೃಹದ ರಾಜಕುಮಾರ ಬಿಂಬಿಸಾರನ ಪತ್ನಿ. ಈಕೆಗೆ ತನ್ನ ಶೃಂಗಾರದ ಮೇಲೆ ಅತ್ಯಂತ ಮೋಹವಿತ್ತು. ತನ್ನನ್ನು ಎಷ್ಟು ಅಲಂಕರಿಸಿಕೊಂಡರೂ ಸಮಾಧಾನವಾಗುತ್ತಿರಲಿಲ್ಲವಳಿಗೆ, ಅಲಂಕರಿಸಿಕೊಳ್ಳುವುದರಲ್ಲಿಯೇ ಕಾಲವನ್ನೆಲ್ಲಾ ವ್ಯಯ ಮಾಡುತ್ತಿದ್ದಳು. ಇದನ್ನು ನೋಡಿ ಬುದ್ಧನು ವ್ಯಥೆ ಪಟ್ಟುಕೊಂಡನು. ಆಗ ಬುದ್ಧನು ಅವಳನ್ನು ಕುರಿತು “ಚಾಪಲ್ಯ ಚಾಂಚಲ್ಯಗಳನ್ನು ಜಯಿಸಿ ಮನುಷ್ಯ ಬದುಕಬೇಕು ಅವುಗಳನು ಅಂಕಿತದಲ್ಲಿಟ್ಟುಕೊಳ್ಳುವಲ್ಲಿಯೆ ತೊಡಗಬೇಕು; ಮನಸ್ಸಿನ ಕೈಯಲ್ಲಿ ಸಿಕ್ಕು ಭ್ರಮಿಸಿ ತಾನೆ ನಾಶವಾಗಬಾರದು ಭ್ರಮಿಸದಿರುವುದೆ ಶಾಂತಿ ಆನಂದ ದೊರೆವುದು ಅದರಿಂದಲೆ” ಹೀಗೆ ಬುದ್ಧನು ಇಂದ್ರಿಯಗಳ ಮೇಲಿನ ಚಂಚಲತೆ ಹಾಗೂ ಮನಸ್ಸಿನ ನಿಗ್ರಹದ ಕುರಿತು ಅರಿವನ್ನು ಮೂಡಿಸಿದನು. ಈ ಉಪದೇಶದಿಂದ ಶ್ರೀಮಂತೆ ಕ್ಷೇಮಾದೇವಿಯು ತಾನು ಸೌಂದರ್ಯಕ್ಕೆ ದಾಸಳಾಗಿದ್ದನ್ನು ಅರಿತುಕೊಂಡು ಜ್ಞಾನವಂತಳಾಗಿ ಭಿಕ್ಕುಣಿಯಾಗುವಳು. ಬುದ್ಧ ಮೂಡಿಸಿದ ಈ ಅರಿವು ಅಂದಂದಿಗೆ ಮಾತ್ರ ಸೀಮಿತವಾದುದಲ್ಲ; ಬದಲಿಗೆ ಈ ಅರಿವು ಇಂದಿನ ಯುವ ಪೀಳಿಗೆಗೆ ಪ್ರಸ್ತುತವಾಗಿದೆ ಎಂದೆನಿಸುತ್ತದೆ.

‘ಕಂಚಿ’ಯೆಂಬ ವೇಶ್ಯೆಯು ಬುದ್ಧನನ್ನು ಅವಮಾನಿಸಲು ಬಂದು ತನ್ನ ಕಪಟ ನಾಟಕದಿಂದ ನಿಂದನೆಗೊಳಗಾದವಳು. ಈಕೆಯು ಒಮ್ಮೆ “ಬುದ್ಧನೊಂದು ದಿನ ಅಪಾರ ಜನಸಂದಣಿಗುಪದೇಶಿಸುತ್ತಿದ್ದಾಗ ಕಂಚಿಯೆಂಬ ಹೆಸರಿನ ವೇಶ್ಯೆಯೊಬ್ಬಳು ಜನರ ಮಧ್ಯೆ ನುಗ್ಗಿ ಬಂದು; ಹೇಳಿಕೊಂಡಳು ತಾನು ಬುದ್ಧನಿಂದ ಬಸಿರಾಗಿರುವೆನಂದುಕೊಂಡು ತನ್ನ ಹೊಟ್ಟೆಯಲಿ ಹೊತ್ತಿರುವ ಮಗು ಮತ್ಯಾರದಲ್ಲ ಬುದ್ಧನದೆಂದು” ಹೀಗೆ ನಡೆದ ಘಟನೆಯಿಂದ ಬುದ್ಧನ ಆಪ್ತವಲಯವನ್ನು ಚಿಂತನೆಗೀಡು ಮಾಡಿತು. ಅಲ್ಲಿ ನೆರೆದಿದ್ದ ಜನ ಕಂಚಿಯ ಈ ಮಾತುಗಳಿಂದ ಆಶ್ಚರ್ಯಚಕಿತರಾಗಿ ಬುದ್ಧನ ವರ್ತನೆ ಸರಿಯಿಲ್ಲವೆಂದು ಶಂಕೆ ಪಡುತ್ತಿದ್ದರು. ಇಂತಹದ್ದೆ ಸನ್ನಿವೇಶಗಳಿಗೆ ಕಾಯುತ್ತ ಇದ್ದರು ಬುದ್ಧನಿಗಾಗದವರು. ಸತ್ಯಾಸತ್ಯತೆಗಳನ್ನರಿಯದೇ ಬುದ್ಧನ ತೇಜೋವಧೆಯನ್ನು ಮಾಡಲಾರಂಭಿಸಿದರು. ಬುದ್ಧನು ಬೋಧಿಸಿದ ಶಾಂತಿ ಮಾರ್ಗವು ಬೇಡವೆಂದು; ಶಾಂತಿ, ಕರುಣೆ ನಿರರ್ಥಕವೆಂದು ಅವಹೇಳನ ಮಾಡುತ್ತಾ ಬುದ್ಧನ ತತ್ವಗಳನ್ನು ಟೀಕೆ ಮಾಡುತ್ತಿದ್ದರು. ಇವ್ಯಾವ ನಿಂದನೆಗಳೂ ಬುದ್ಧನ ಮೇಲೆ ಪ್ರಭಾವ ಬೀರಲಿಲ್ಲ. ಕಂಚಿಯು ಒಮ್ಮೆ ಬುದ್ಧನು ಉಪದೇಶ ಮಾಡುತ್ತಿದ್ದ ಸಮಯದಲ್ಲಿಯೇ ತನಗೆ ಹೆರಿಗೆಗೆ ಸಕಲ ಸಿದ್ಧತೆಗಳನ್ನು ಮಾಡಿರೆಂದು ಜನರೆದುರು ಅಂಗಲಾಚುತ್ತಿದ್ದಳು. ಕಂಚಿಯ ಮಾತುಗಳಿಂದ ಜನ ಚಕಿತರಾಗಿದ್ದರು. ಆಗ ಬುದ್ಧನು,

“ನಿನ್ನ ಮಾತಿನ ಸತ್ಯವೇನೆನ್ನುವುದು ನಮ್ಮಿಬ್ಬರಿಗೆ ಮಾತ್ರ ಗೊತ್ತು; ಅವಳನುದ್ದೇಶಿಸಿ ನುಡಿದ ಬುದ್ಧನಿಂತು ಕುಳಿತುಕೊ ಎಂದು ಹೇಳಿ ತಥಗತನ ಬಾಯಿಂದ ಮಾತು ಹೊರಡುವುದೆ ತಡ ಆಗಲೇ ಅವಳು ಅಷ್ಟರಲಿ ನಡೆಯಿತು ಇನ್ನೊಂದು ಘಟನೆಯು ಅಲ್ಲಿ ಆಗಲೆ ಅದು ಹೊಟ್ಟೆಗೆ ಸುತ್ತಿಕೊಂಡಿದ್ದ ಬಟ್ಟೆ ಬಿಗಿದದ್ದು ಅಡಲಿ ಬಿತ್ತು ಕೆಳಗೆ; ಜಾರಿ ಕೆಳಗೆ ಬಿದ್ದಿತ್ತು ಖಾಲಿಯಾಗಿತ್ತಾಗ ಬಸುರಿಯಂತಿದ್ದವಳ ಹೊಟ್ಟೆ ಕಂಚಿಯ ಕಪಟ ನಾಟಕ ನೋಡಿ ಬೆಚ್ಚಿಬಿದ್ದರು ಜನತೆ ಆಗ ಚಕಚಕಿತರಾಗಿ”.

ಇಂತಹ ಸನ್ನಿವೇಶವು ನಡೆದಾಗ ಅಲ್ಲಿನ ಜನ ಸಿಟ್ಟನ್ನು ತಾಳಲಾರದೆ ಅವಳನ್ನು ಬೈದು, ಹೊಡೆಯಲಾರಂಭಿಸಿದರು. ಆಗ ಮೂಕವಿಸ್ಮಿತಳಾಗಿ ಕುಳಿತಿದ್ದಳು ಕಂಚಿ. ಕೊನೆಗೆ ಬುದ್ಧನೇ ಎಲ್ಲವನ್ನೂ ಶಾಂತಿಗೊಳಿಸಿ ತಿಳಿ ಹೇಳಿದನು. ಈ ಹೊಂಚನ್ನು ಅನ್ಯಧರ್ಮಿಯರು ಹಾಕಿದ್ದರು ಆದರೆ ಎಲ್ಲವೂ ವ್ಯರ್ಥವಾದವು. ಈ ಎಲ್ಲಾ ಆಗುಹೋಗುಗಳನ್ನು ಶಾಂತಚಿತ್ತದಿಂದಲೇ ಗಮನಿಸುತ್ತಾ ತನ್ನ ತತ್ವಗಳನ್ನು ಬಿಡದೇ ಪಾಲಿಸುತ್ತಿದ್ದ ಬುದ್ಧನ ಅರಿವು ಇಂದಿನ ಸಮಾಜಕ್ಕೂ ಇಂದಿಗೂ ಅತ್ಯಗತ್ಯವಾದುದಾಗಿದೆಯೆಂದು ಲೇಖಕರು ನಿರೂಪಿಸಿರುವ ಬಗೆ ವಿಶಿಷ್ಟವಾಗಿದೆ. ಅಂದಿಗೂ ಇಂದಿಗೂ ಸಹ ಸಮಾಜದಲ್ಲಿ ಪ್ರಾಮಾಣಿಕರ ವಿರುದ್ಧದ ಇಂತಹ ಸಂಚುಗಳು ನಡೆಯುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಪ್ರಾಮಾಣಿಕ ವ್ಯಕ್ತಿಗಳ ರಕ್ಷಣೆಗೆ ಅಂದಿಗೆ ಬುದ್ಧನ ಸಾಮಾಜಿಕ ನ್ಯಾಯದ ತತ್ವಗಳಿದ್ದವು; ಇಂದಿಗೆ ಅದೇ ಬುದ್ಧನ ತತ್ವಗಳ ಹಿನ್ನೆಲೆಯಲ್ಲಿಯೇ ರಚನೆಯಾದಂತಹ ಸಂವಿಧಾನವು ಇದೆ ಎಂಬುದನ್ನು ಈ ಸನ್ನಿವೇಶವು ನಮಗೆ ನೆನಪಿಗೆ ತರುತ್ತದೆಯೆಂದು ಹೇಳಿದರೆ ತಪ್ಪಾಗಲಾರದು.

‘ಕಿಸಾಗೋತಮಿ’ಯು ಬೌದ್ಧ ಮಹಿಳಾ ಭಿಕ್ಕುಗಳಲ್ಲಿ ಪ್ರಮುಖಳಾದವಳು. ಈಕೆಯ ಹಲವಾರು ವಿಶೇಷಣಗಳಿರುವ ಭಿಕ್ಷುಣಿ. ಕಠೋರ ವ್ರತಗಳನ್ನು ಅತ್ಯಂತ ನಿಷ್ಠೆಯಿಂದ ಆಚರಿಸುವಳು ಎನ್ನುವುದು ಈಕೆಯ ವಿಶಿಷ್ಟ ಗುಣ. ಬಡಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಅವಳಿಗೆ ಮದುವೆಯಾದ ನಂತರ ಅವಳ ಗಂಡನ ಕುಟುಂಬದವರು ಅವಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅವಳಿಗೊಂದು ಗಂಡು ಮಗು ಜನಿಸಿದಾಗ ವಂಶೋದ್ಧಾರಕ ಜನಿಸಿದನೆಂಬ ಕಾರಣಕ್ಕೆ ಅವಳನ್ನು ಪ್ರೀತಿಯಿಂದ ಕಾಣಲಾರಂಭಿಸುತ್ತಾರೆ. ಮನೆಯೊಳಗಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಎಲ್ಲವೂ ಸರಿಯಾಯಿತೆನ್ನುವಷ್ಟರಲ್ಲಿ ಅನಿರೀಕ್ಷಿತವಾಗಿ ಅವಳ ಮಗು ಹಾವು ಕಡಿತದಿಂದ ತೀರಿಹೋಗುತ್ತದೆ; ಆಘಾತಕ್ಕೊಳಗಾಗುತ್ತಾಳೆ. ತನ್ನ ಮಗು ತೀರಿಹೋಗಿಲ್ಲ ಖಾಯಿಲೆಯಾಗಿದೆ ಔಷಧಿ ಕೊಡಿಸಿದರೆ ಸರಿಹೊಗುತ್ತದೆಯೆಂದು ಮಗುವಿನ ಹೆಣವನ್ನು ಎದೆಗವಿಚಿಕೊಂಡು ಎಲ್ಲರನ್ನೂ ಔಷಧಕ್ಕಾಗಿ ಬೇಡಿಕೊಳ್ಳುತ್ತಾಳೆ. ನದಿಯ ದಂಡೆಯ ಮೇಲೆ ಸನ್ಯಾಸಿಯೊಬ್ಬನು ಕುಳಿತಿರುವನು ಆತ ಔಷಧವ ಕೊಟ್ಟರೆ ತನ್ನ ಮಗು ಬದುಕುವನೆಂದು ಯಾರೋ ಹೋಗುವವರು ಹೇಳಿ ಕಳಿಸುತ್ತಾರೆ. ಆಗ ಆಕೆ;

“ಮಗುವನೆತ್ತಿಕೊಂಡೊಡಿದಳು ಸನ್ಯಾಸಿಯತ್ತ ಲಗುಬಗೆಯಿಂದ ಔಷಧಿಯ ನೀಡಬೇಕೆಂದು ಬೇಡಿಕೊಂಡಳು ಆ ಸನ್ಯಾಸಿಯನು; ಹೂವು ಕೊಯ್ಯುತ್ತಿರುವಾಗ ತನ್ನ ಮಗು ವಿಷ ಸರ್ಪ ಕಚ್ಚಿ ಸತ್ತಿತೆಂದು ಗೋಗರೆದಳವಳು ಮಗು ತಣ್ಣಗಾಯಿತೆಂದು”

ಹೀಗೆ ಬುದ್ಧನ ಬಳಿಗೆ ಬಂದು ಕಿಸಾಗೋತಮಿಯು ತನ್ನ ಮಗುವನ್ನು ಬದುಕಿಸಿಕೊಡಿಯೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಅವಳ ಸ್ಥಿತಿಯನ್ನು ಕಂಡ ಬುದ್ಧನು

“ಹೋಗಮ್ಮ ಬದುಕಿಸಬಹುದು ನಾ ನಿನ್ನ ಮಗುನನ್ನು ನಂಬು ನನ್ನ ಆದರೆ ನೀನು ಈಗಿಂದೀಗಲೇ ಯಾರಾದರೂ ಮನೆಗೆ ಹೋಗಿ; ಸಾವಿಲ್ಲದ ಮನೆಯ ಸಾಸಿವೆಯ ಕಾಳ ತೆಗೆದುಕೊಂಡು ಬಾ ಎಂದ”

ಇದನ್ನು ಕೇಳಿಸಿಕೊಂಡ ಕಿಸಾಗೋತಮಿಯು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಊರೊಳಗೆ ಹೋಗುತ್ತಾಳೆ. ಆಗ ಸಾಸಿವೆಯನ್ನು ಬೇಡಲು ಮುಂದಾಗುತ್ತಾಳೆ; ಸಾಸಿವೆನ್ನು ನೀಡಲು ಬಂದವರಲ್ಲಿ ‘ನಿಮ್ಮ ಮನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲವೇ’ ಎಂದು ಕೇಳುತ್ತಾಳೆ. ಆಗ ಒಬ್ಬಳು ಮೊನ್ನೆ ನನ್ನ ತಂದೆ, ಇನ್ನೊಬ್ಬರ ಮನೆಯಲ್ಲಿ ಇವತ್ತಿಗೆ ಒಂದು ವಾರದ ಹಿಂದೆ ನನ್ನ ಮೈದುನ ತೀರಿಹೋಗಿದ್ದಾನೆ ಎಂದು ಎಲ್ಲಾರೂ ಹೀಗೆ ಹೇಳುತ್ತಾರೆ. ಕೊನೆಗೆ ಆಕೆಗೆ ಸಾವಿಲ್ಲದ ಮನೆಯ ಸಾಸಿವೆ ಸಿಗಲಾರದೇ ಬುದ್ಧನ ಬಳಿಗೆ ಹಿಂತಿರುಗಿ, ಸಾವಿಲ್ಲದ ಮನೆಯ ಸಾಸಿವೆ ಸಿಗಲಿಲ್ಲವೆಂದು ಹೇಳುತ್ತಾಳೆ. ಸ್ವಲ್ಪಹೊತ್ತಿನಲ್ಲಿಯೇ ಸಾವಿಲ್ಲದ ಮನೆಯಿಲ್ಲವೆಂಬುದನ್ನು ಬುದ್ಧ ಮಹಾಗುರುವು ಅರಿವು ಮೂಡಿಸುತ್ತಾನೆ. ಆಗ ಕಿಸಾಗೋತಮಿ ಸ್ಮಶಾನಕ್ಕೆ ಹೋಗಿ ಹೆಣವನ್ನು ಹೂತಿಟ್ಟು ನೇರವಾಗಿ ಬುದ್ಧನ ಬಳಿ ಬಂದು ಭಿಕ್ಕುಣಿ ದೀಕ್ಷೆಯನ್ನು ಪಡೆಯುತ್ತಾಳೆ. ತನ್ನಂತಹ ಹಲವಾರು ನೊಂದ ಮಹಿಳೆಯರಿಗೆ ಅವಳು ಬೆಳಕಿನ ಕಿಂಡಿಯೊಂದನ್ನು ತೆರೆಯುತ್ತಾಳೆ.

ಅಮ್ರಪಾಲಿಯು ವೇಶ್ಯೆಯಾಗಿದ್ದಳು. ಬುದ್ಧನ ಬೋಧನೆಗಳಿಗೆ ಮತ್ತು ವ್ಯಕ್ತಿತ್ವದಿಂದ ಆಕರ್ಷಿತಳಾದವಳು. ತನ್ನಲ್ಲಿದ್ದ ಅಪಾರ ಐಶ್ವರ್ಯ ಮತ್ತು ಸೌಂದರ್ಯ ವ್ಯಾಮೋಹವನ್ನು ತೊರೆದು ಬೌದ್ಧ ಸನ್ಯಾಸಿಯಾದವಳು. ತನ್ನ ಸುಂದರವಾದ ಮಾವಿನ ತೋಪನ್ನು (ಆಮ್ರವನ) ಬುದ್ಧ ಸಂಘಕ್ಕೆ ದಾನ ಮಾಡಿದವಳು. ಈಕೆ ಬುದ್ಧನನ್ನು ಭಿಕ್ಷೆಯನ್ನು ಸ್ವೀಕರಿಸಲು ಆಹ್ವಾನವನ್ನು ನೀಡುತ್ತಾಳೆ. ಇದಕ್ಕೆ ಒಪ್ಪುತ್ತಾನೆ. ಮಾರನೆಯ ದಿನ ಭಿಕ್ಷೆಗೆ ಹೋಗಿ ಭಿಕ್ಷೆಯನ್ನು ಸ್ವೀಕರಿಸಿ ಅಲ್ಲಿ ಆಕೆಗೆ ಉಪದೇಶವನ್ನು ಮಾಡುತ್ತಾನೆ. “ಸೌಂದರ್ಯವೆನ್ನುವ ಭ್ರಮೆಯ ಹಿಂದೆ ಅಡಗಿಹುದು ಗೂಢ ಕಣ್ಣು ಮನಗಳನು ಕಳೆದು ಕರೆಯುವುದು ಅಪ್ಪಿಕೊಳ್ಳಲು ಸಾವು ; ವಸ್ತು ಒಡವೆಗಳನಲ್ಲಿಯೇ ಚೆಲ್ಲಿ ಹೊರಡಬೇಕಾಗುವದು ನಾವು ಸೇರಿ ಹೋಗುವುದು ಪಂಚಭೂತಗಳಲ್ಲಿ ಇಲ್ಲವಾಗಿ ಏನೇನೂ”

ಹೀಗೆ ಬುದ್ಧನು ಆಮ್ರಪಾಲಿಗೆ ಈ ನಶಿಸಿಹೋಗುವ ದೇಹದ ಸೌಂದರ್ಯದ ಬಗೆಗೆ ವಿವರಿಸಿ; ಆಮ್ರಪಾಲಿಗಿರುವ ಭ್ರಮೆಯ ಬಗೆಗೆ ಅರಿವನ್ನು ಮೂಡಿಸಿ ಆಕೆಯನ್ನು ಬೌದ್ಧ ಸಂಘಕ್ಕೆ ಸೇರಲು ಅವಕಾಶವನ್ನು ನೀಡಿದನು. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ, ಬುದ್ಧನ ಉಪದೇಶಗಳು ಶ್ರೀಮಂತರ, ಉಚ್ಚ ಕುಲದವರ ಏಳಿಗೆಗೆ ಮಾತ್ರ ಸೀಮಿತವಾಗಿಲ್ಲ; ವೇಶ್ಯೆಯಾದ ಆಮ್ರಪಾಲಿಗೂ ಸೇರಿದಂತೆ ವಿಶ್ವದ ಸಕಲ ಜೀವರಾಶಿಗಳ ಏಳಿಗೆಗೂ ಉಪಯುಕ್ತವಾಗಿವೆ ಎಂಬುದನ್ನು ಲೇಖಕರು ಕಟ್ಟಿಕೊಟ್ಟಿರುವ ರೀತಿ ಬಹಳ ವಿಶಿಷ್ಟವಾದುದಾಗಿದೆ. ಹಾಗಾಗಿಯೇ ಬುದ್ಧರ ತತ್ವಗಳು ಇಂದಿಗೂ ಪ್ರಸ್ತುತವಾಗುತ್ತವೆ.

ಒಟ್ಟಾರೆಯಾಗಿ ಡಾ.ಬುದ್ಧಣ್ಣ ಹಿಂಗಮಿರೆ ಅವರು ರಚಿಸಿದಂತಹ ‘ಬುದ್ಧಕಾವ್ಯ ದರ್ಶನ’ ಮಹಾಕಾವ್ಯವು ಪುರುಷ ಭಿಕ್ಕುಗಳಷ್ಟೇ ಬೌದ್ಧ ಮಹಿಳಾ ಭಿಕ್ಕುಗಳು ಶ್ರೇಷ್ಠಯೆಂಬುದನ್ನು ಸಾಬೀತು ಮಾಡಿದೆಯೆಂಬುದರಲ್ಲಿ ಅನುಮಾನಗಳಿಲ್ಲವೆಂದೇ ಹೇಳಬಹುದು. ವೇದಕಾಲದಲ್ಲಿ ಅದೃಶ್ಯವಾಗಿದ್ದ ಮಹಿಳೆಯರ ಸ್ಥಿತಿಗತಿಗಳು ಬುದ್ಧನ ಕಾಲದಲ್ಲಿ ಅಷ್ಟಷ್ಟು ಬೆಳಕಿಗೆ ಬಂದವು. ಇಸೆಲಿನ್ ಬ್ಲೂ ಹಾರ್ನರ್ ಎಂಬ ಇತಿಹಾಸಜ್ಞೆ ಹೇಳುವಂತೆ ‘ವೇದಕಾಲದ ಹೆಣ್ಣಿನ ಮೌಲ್ಯವನ್ನೂ, ಸಾಮಾನ್ಯ ಅಧಿಕಾರಗಳನ್ನೂ ಬುದ್ಧನ ಧಮ್ಮವು ಹೆಚ್ಚಿಸಿತು’ ಎಂದು ಹೇಳುತ್ತಾರೆ. ಭಿಕ್ಕುಣಿ ಸಂಘ ಆರಂಭವಾದ ಬಳಿಕ ಮಗಳನ್ನು ಹೊರೆ ಎಂಬಂತೆ ನೋಡುವ ದೃಷ್ಟಿ ಬದಲಾಗಿ ಮದುವೆಯಾಗದೇ ಉಳಿದ ಹೆಣ್ಣುಗಳನ್ನೂ ಗೌರವದಿಂದ ನೋಡುವ ಪರಿಪಾಠ ಆರಂಭಗೊಂಡು; ಅವಿವಾಹಿತ ಹೆಣ್ಣುಗಳನ್ನೂ ಸಮಾಜ ಗೌರವದಿಂದ ನೋಡತೊಡಗಿತು.

ಪರಾಮರ್ಶನ ಗ್ರಂಥಗಳು:

  1. ಬುದ್ಧಕಾವ್ಯ ದರ್ಶನ, ಬುದ್ಧಣ್ಣ ಹಿಂಗಮಿರೆ, ಯುಗಧ್ವನಿ ಪ್ರಕಾಶನ, ಧಾರವಾಡ, 2003.

  2. ಥೇರಿಗಾಥಾ ಕಾಣಿಸಿದ ಹೆಣ್ಣು, ಬೌದ್ಧ ಧರ್ಮದಲ್ಲಿ ಮಹಿಳೆ. ಶೈಲಜಾ, ಜೀರುಂಡೆ ಪುಸ್ತಕಾಲಯ, ಬೆಂಗಳೂರು. 2025.

  3. ಬುದ್ಧ ಧಮ್ಮ ಮತ್ತು ಮಹಿಳೆ, ಪ್ರ.ಸಂ. ಡಾ. ಡಿ.ವಿ. ಪರಮಶಿವಮೂರ್ತಿ, ಸಂ. ಶೈಲಜ ಇಂ. ಹಿರೇಮಠ, ಲೇ. ಡಾ. ಹೆಚ್.ಎಸ್. ಅನುಪಮಾ, ಪ್ರಸಾರಾಂಗ. ಹಂಪಿ ವಿ.ವಿ. 2026.

Files

Restricted

The record is publicly accessible, but files are restricted. Log in to check if you have access.

Additional details