ಗಂಡುಗಲಿ ಮದಕರಿನಾಯಕ ಕಾದಂಬರಿಯಲ್ಲಿ ಸಂಚಿನ ರಾಜಕಾರಣ
Authors/Creators
- 1. ಸಂಶೋಧನಾರ್ಥಿ ಕನ್ನಡ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ
Description
ಚಿತ್ರದುರ್ಗವನ್ನು ಆಳಿದ ಪಾಳೇಗಾರರಲ್ಲೇ ಪ್ರಸಿದ್ಧ ಅರಸ ಮದಕರಿನಾಯಕ. ಚಿತ್ರದುರ್ಗವಷ್ಟೇ ಅಲ್ಲದೆ, ಕರ್ನಾಟಕದ ಜನತೆಯ ಮನದಲ್ಲಿ ತನ್ನದೇ ಆದ ಛಾಪು ಮೂಡಿಸಿದ, ಪಾಳೇಗಾರರ ಇತಿಹಾಸಕ್ಕೊಂದು ಹಿರಿಮೆಯನ್ನು ತಂದುಕೊಟ್ಟ ದುರ್ಗದ ಕೊನೆಯ ಪಾಳೇಗಾರ, ಮಹಾಪರಾಕ್ರಮಿ, ಚಿತ್ರದುರ್ಗದವರ ಸ್ವಾಭಿಮಾನದ ಸಂಕೇತವೇ ಮದಕರಿನಾಯಕ. ಈ ಮದಕರಿನಾಯಕನ ಕುರಿತು ಬಿ.ಎಲ್. ವೇಣು ಅವರು "ಗಂಡುಗಲಿ ಮದಕರಿನಾಯಕ" ಎಂಬ ಐತಿಹಾಸಿಕ ಕಾದಂಬರಿಯನ್ನು ರಚಿಸಿದ್ದಾರೆ. ಈ ಕಾದಂಬರಿಯು ಮದಕರಿನಾಯಕನ ಆಳ್ವಿಕೆಯಲ್ಲಾದ ಘಟನೆಗಳನ್ನು, ಆತನ ಶೌರ್ಯ, ಸಾಹಸಗಳನ್ನು ಚಿತ್ರಿಸುವುದು ಅಷ್ಟೇ ಅಲ್ಲದೆ, ಆಡಳಿತದಲ್ಲಿನ ವಿಷಮಸ್ಥಿತಿಯನ್ನು ಸವಿಸ್ತಾರವಾಗಿ ದಾಖಲಿಸುತ್ತದೆ. ಮದಕರಿಗೆ ಪಟ್ಟಕಟ್ಟಿದಾಗಿನಿಂದಲೇ ದುರ್ಗದ ರಾಜಕೀಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗುತ್ತದೆ. ದೊಡ್ಡಮದಕರಿ ಇರುವಾಗಲೇ ಆತನಿಗೆ ಪಟ್ಟಕಟ್ಟಿದ್ದು ಪ್ರಧಾನಿ ನರಸಪ್ಪನಿಗೆ ಹಾಗೂ ಜಂಪಣ್ಣನಾಯಕನಿಗೆ ಒಪ್ಪದ ವಿಚಾರವಾಗಿತ್ತು. ಓಬವ್ವನ ಮಗನಾದ ಚಿಕ್ಕಮದಕರಿಗೆ ಸಿಂಹಾಸನಕ್ಕೇರಿಸಿದ್ದು ಅವರಿಬ್ಬರಲ್ಲಿ ವೈಷಮ್ಯಕ್ಕೆ ಕಾರಣವಾಗಿತ್ತು. ಜಂಪಣ್ಣನಾಯಕನಿಗೆ ಸಿಂಹಾಸನದ ಅಧಿಕಾರದ ವ್ಯಾಮೋಹ ಹುಟ್ಟಿಸಿ, ಆ ಮೂಲಕ ತಾನು ಸಿಂಹಾಸನದ ಚುಕ್ಕಾಣಿ ಹಿಡಿಯಲು ಪ್ರಧಾನಿ ಕಳ್ಳಿನರಸಪ್ಪ ಹಲವಾರು ತಂತ್ರ-ಕುತಂತ್ರಗಳ ಮೂಲಕ ಗಂಡುಗಲಿ ಮದಕರಿನಾಯಕನನ್ನು ಕೊಲ್ಲಲು ಸಂಚು ರೂಪಿಸಿದ್ದನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಮದಕರಿ ಅಧಿಕಾರಕ್ಕೆ ಬಂದಾಗ 12 ವರ್ಷದವನಾಗಿದ್ದರೂ, ದುರ್ಗದ ಸುತ್ತಮುತ್ತಲಿನ ನಾಯಕರ ಜೊತೆ ನಡೆದ ಯುದ್ಧಗಳಲ್ಲಿ ಆತನ ಧೈರ್ಯ, ಸಾಹಸ ಹಾಗೂ ಹೈದರಾಲಿ, ಟಿಪ್ಪುವಿನೊಂದಿಗೆ ನಡೆದ ತಂತ್ರ-ಪ್ರತಿತಂತ್ರ, ಕುಟಿಲ ನೀತಿ, ರಾಜತಾಂತ್ರಿಕತೆ ಹೀಗೆ ಭಿನ್ನನೋಟಗಳ ನೆಲೆಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು.
ಈ ಕಾದಂಬರಿಯು ದಸರಾ ಹಬ್ಬದಲ್ಲಿ ನಡೆಯುವ ರೋಚಕ ಕ್ರೀಡೆಗಳಲ್ಲಿನ ಮದಕರಿಯ ಸಾಹಸ ವರ್ಣನೆಯಿಂದ ಆರಂಭಗೊಂಡು, ಮದಕರಿನಾಯಕನ ಪಟ್ಟಾಭಿಷೇಕ, ಯುದ್ಧಗಳಲ್ಲಿ ಮದಕರಿಯ ಹೋರಾಟ, ಆಡಳಿತದಲ್ಲಿನ ಜನಪರ ನಿಲುವುಗಳು, ಸುತ್ತಮುತ್ತಲಿನ ಶತ್ರು ಸಂಸ್ಥಾನಗಳ ರಾಜಕೀಯ ಸೂಕ್ಷ್ಮ ವಾತಾವರಣದ ಮೇಲೆ ನಿಗಾ ವಹಿಸುವ ಎಚ್ಚರ, ಹಿಂದೂ-ಮುಸ್ಲಿಂ ಧಾರ್ಮಿಕ ಸಾಮರಸ್ಯ, ಸೈನಿಕರಿಗೆ ಪ್ರೋತ್ಸಾಹ, ಜನಸಾಮಾನ್ಯರ ಬಗೆಗಿನ ಕಾಳಜಿ, ಪ್ರಮುಖ ನಿರ್ಧಾರಗಳಲ್ಲಿ ಮಂತ್ರಾಲೋಚನಾ ಸಭೆ ಕರೆಯುವಂತದ್ದು, ಗಂಡೆದೆಯ ಒನಕೆ ಓಬವ್ವನ ಹೋರಾಟ, ಮಹಿಳೆಯರು ಯುದ್ಧದಲ್ಲಿ ಪಾಲ್ಗೊಳ್ಳುವ ಸನ್ನಿವೇಶಗಳು, ಕಲಾವಿದರ ಪೋಷಣೆ, ಕೊಟ್ಟ ಮಾತಿಗೆ ಬದ್ಧನಾಗಿರುವುದು ಹೀಗೆ ಅನೇಕ ಅಂಶಗಳನ್ನು ಕಾಣಬಹುದು. ಹೈದರಾಲಿಯ ಜೊತೆಗಿನ ಸ್ನೇಹವೇ ಮದಕರಿಗೆ ಮುಳುವಾಗುವುದು, ಕಳ್ಳಿನರಸಪ್ಪ ಮತ್ತು ಜಂಪಣ್ಣನಾಯಕರ ಅಧಿಕಾರದ ವ್ಯಾಮೋಹ, ಸಂಚಿನ ರಾಜಕಾರಣದ ತಂತ್ರಗಾರಿಕೆಯೇ ನಾಯಕನ ಮೃತ್ಯುವಿಗೆ ಕಾರಣವಾಗಿ ಇಡೀ ಚಿತ್ರದುರ್ಗ ಸಾಮ್ರಾಜ್ಯವೇ ಶತ್ರುಗಳ ದಾಳಿಗೆ ಸಿಕ್ಕು ಅಧಃಪತನಗೊಳ್ಳುತ್ತದೆ.
ಮದಕರಿಯನ್ನು ಮುಗಿಸುವ ಯತ್ನದಲ್ಲಿ ಸದಾ ಮಗ್ನನಾಗಿದ್ದ ಕಳ್ಳಿನರಸಪ್ಪನು, ಓಬವ್ವನೊಂದಿಗೆ ಮದಕರಿ ಏಕಾಂಗಿಯಾಗಿ ಮೈಸೂರಿಗೆ ಹೋಗಿದ್ದನ್ನು ತಿಳಿದು ಶತ್ರುಗಳಿಂದ ಮುಗಿಸುವ ಸಂಚು ರೂಪಿಸಿದನು. ಚಾಮುಂಡಿ ದೇವಿಯ ದರ್ಶನ ಸಮಯದಲ್ಲಿ ಕಾಡಾನೆಯು ಜನರ ಮೇಲೆ ದಾಳಿ ಮಾಡಿದಾಗ, ಮದಕರಿ ಅದನ್ನು ಎದುರಿಸಿ ಸಾಯಿಸಿದ್ದು ಮತ್ತು ಜನರನ್ನು ರಕ್ಷಿಸಿದ್ದು ಟಿಪ್ಪುವಿಗೂ ತಲುಪುತ್ತದೆ. ಟಿಪ್ಪು ಮದಕರಿಯ ಧೈರ್ಯ, ಸಾಹಸವನ್ನು ಮೆಚ್ಚಿ ಆಸ್ಥಾನಕ್ಕೆ ಬರಮಾಡಿಕೊಂಡು ಸತ್ಕರಿಸುತ್ತಾನೆ. ಇದರ ಹಿಂದೆ ರಣತಂತ್ರವಿರುತ್ತದೆ; ಸಾಹಸಿಗಳೊಂದಿಗಿನ ಶತ್ರುತ್ವಕ್ಕಿಂತ ಸ್ನೇಹ ಹಸ್ತ ಚಾಚುವುದರಲ್ಲಿ ಲಾಭವಿದೆ ಎಂದು ದಿವಾನ್ ಪೂರ್ಣಯ್ಯ ಹೇಳಿದಾಗ, ಹೈದರಾಲಿಯು "ನಾಯಕರ ಸ್ನೇಹ ಮಾಡಿ, ನಾಯಕ-ನಾಯಕರಿಗೆ ಬಡಿದಾಟ ಹತ್ತಿಸೋಣ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ" ಎಂಬ ರಣವ್ಯೂಹದ ಆಲೋಚನೆಯಿಂದ ಮದಕರಿಯ ಸ್ನೇಹ ಬಯಸುತ್ತಾನೆ. ಇದರಿಂದ 'ಶತ್ರುಗಳ ಶತ್ರು ಮಿತ್ರ' ಎಂಬಂತೆ ಮುಂದೆ ನಾಡನ್ನು ವಶಪಡಿಸಿಕೊಳ್ಳಬಹುದು ಎಂಬ ಆಲೋಚನೆಯನ್ನು ಹೈದರಾಲಿ ಮತ್ತು ದಿವಾನ್ ಪೂರ್ಣಯ್ಯನವರು ಮಾಡುತ್ತಾರೆ ಹೊರತು ಕಳ್ಳಿನರಸಪ್ಪನ ಮಾತಿಗೆ ಕಿವಿಗೊಡುವುದಿಲ್ಲ. ಮೊದಲ ಪ್ರಯತ್ನ ವಿಫಲಗೊಂಡರೂ ಅವರು ಪ್ರಯತ್ನಿಸುವುದನ್ನು ಬಿಡುವುದಿಲ್ಲ.
ಗಂಡುಗಲಿ ಮದಕರಿಯು ಸದಾ ಶತ್ರುಸಂಸ್ಥಾನದವರ ಚಲನವಲನಗಳನ್ನು ಗಮನಿಸುತ್ತಿದ್ದವನು. ಗುಡಿಕೋಟೆ ಜಟ್ಟಂಗಿನಾಯಕನ ಸೇನಾ ಜಮಾವಣೆ, ಮದ್ದುಗುಂಡುಗಳ ಸಂಗ್ರಹಣೆ, ಗಡಿಗಳಲ್ಲಿನ ಉಪಟಳವನ್ನು ಬೇಹುಗಾರರಿಂದ ತಿಳಿದ ಮದಕರಿನಾಯಕ, ಆ ನಾಡಿನ ವ್ಯವಸ್ಥೆಯನ್ನು ತಿಳಿಯಲು ದಳವಾಯಿ ಮತ್ತು ಪ್ರಧಾನಿಯನ್ನು ಕಳಿಸದೆ ತಾನೇ ಹೊರಡುತ್ತಾನೆ. ಮನಸ್ಸು ಮಾಡಿದರೆ ಯುದ್ಧ ಮಾಡಬಹುದಿತ್ತು, ಆದರೆ ಪದೇಪದೇ ಯುದ್ಧ ಮಾಡುವುದರಿಂದ ಶತ್ರುಗಳಿಗೆ ನಮ್ಮ ತಂತ್ರಗಳು ತಿಳಿಯುತ್ತವೆ ಎನ್ನುವ ಯೋಚನೆ ಮದಕರಿಯದ್ದು. ಹಾಗಾಗಿ ಯುದ್ಧ ಬೇಡವೆನ್ನುತ್ತಾನೆ. ಮೊದಲು ಅವರ ಬಲಾಬಲಗಳನ್ನ ಅರಿಯಬೇಕು, ನಂತರವೇ ಯುದ್ಧ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಅದಕ್ಕೆ ಮೊದಲು ಮಾರ್ಗದಲ್ಲಿ ಹೋಗಿ ತಿಳಿದುಕೊಂಡು ಬರಲು ಕಳ್ಳಿನರಸಪ್ಪ ಜಂಪಣ್ಣನ ಹೆಸರನ್ನು ಸೂಚಿಸುತ್ತಾನೆ. ಇದನ್ನು ಒಪ್ಪದ ಮದಕರಿಯು ಸ್ವತಃ ತಾನೇ ಹೋಗಲು ನಿರ್ಧರಿಸುತ್ತಾನೆ. ಇದನ್ನು ಬೇಕಂತಲೇ ಕಳ್ಳಿನರಸಪ್ಪನು ಸೂಚಿಸಿದ್ದು ಒಂದು ಸಂಚಾಗಿತ್ತು. ಆತನ ಹೆಸರನ್ನು ಸೂಚಿಸಿದರೆ ನಾಯಕರು ತಾವೇ ಹೋಗುತ್ತೇವೆ ಎಂದು ಹೇಳಿಯೇ ಹೇಳುತ್ತಾರೆ ಎಂಬುದು ನರಸಪ್ಪನಿಗೆ ಗೊತ್ತಿತ್ತು. ಹಾಗಾಗಿಯೇ ಈ ಮದಕರಿಯನ್ನು ಗುಡಿಕೋಟಿಗೆ ಅಟ್ಟುವ ರಾಜತಾಂತ್ರಿಕ ನಿಲುವಿನ ಹಿಂದೆ ಆತನ ಮರಣವಾರ್ತೆಯನ್ನು ಕೇಳುವ ಸಂಚು ಇತ್ತು.
ರಾಜ ಪ್ರಜೆಗಳ ಪರ, ಲೋಕ ಕಲ್ಯಾಣಗಳ ಪರವಾಗಿದ್ದರೆ ಆದರ್ಶ ರಾಜಪ್ರಭುತ್ವವಾಗುತ್ತದೆ. ಮದಕರಿಯ ಆಡಳಿತ, ದುರ್ಗದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಕಂಡ ಜಂಪಣ್ಣನಾಯಕನಿಗೆ ಸಹಿಸಲಾರದ ಸಂಕಟ ಒಂದೆಡೆಯಾದರೆ, ದುರ್ಗದ ದೊರೆಯಾಗುವ ಕನಸು ಕಮರಿದ್ದಕ್ಕೆ ನಿರಾಶೆ, ಅತೃಪ್ತಿ ಇತ್ತು. ಆದರೆ ಕಳ್ಳಿನರಸಪ್ಪನ ಅಧಿಕಾರದ ವ್ಯಾಮೋಹ ಹೆಚ್ಚುತ್ತಲೇ ಇತ್ತು. ಹಾಗಾಗಿ ಮದಕರಿಯನ್ನು ಇಲ್ಲವಾಗಿಸುವಲ್ಲಿ ಅನೇಕ ತಂತ್ರಗಳನ್ನು, ಕುಟಿಲ ನೀತಿಗಳನ್ನು ಆಲೋಚಿಸುತ್ತಿದ್ದನು. ದುರ್ಗದ ಸುತ್ತಮುತ್ತಲಿನ ಸಂಸ್ಥಾನಗಳಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಿದ್ದನು. ನವಾಬ ಹೈದರಾಲಿಯು ಇಕ್ಕೇರಿ, ಜರಿಮಲೆ ಯುದ್ಧ ಸಾರಿದ ವಿಷಯ ತಿಳಿದುಕೊಂಡವನೇ, ದುರ್ಗದ ಮೇಲೆ ಬೀಳುವಂತೆ ಮಾಡೋಣ ಎಂದು ಜಂಪಣ್ಣನಿಗೆ ನರಸಪ್ಪನೇ ಹೇಳುತ್ತಾನೆ. ಜಂಪಣ್ಣ ಇದು ಆಗದ ವಿಷಯ ಎಂದಾಗ, "ರಕ್ತ ಸಂಬಂಧಗಳಿಗೂ ಖಾತರಿ ಇಲ್ಲ, ಸ್ನೇಹದ ಖಾತೆ ಎಷ್ಟರದು? ಹೆಣ್ಣು ಕೊಟ್ಟ ಪಾಳೆಗಾರ ಹನುಮಪ್ಪ ನಾಯಕನೇ ಮದಕರಿ ನಾಯಕರ ವಿರುದ್ಧ ಹಗೆ ಸಾಧಿಸುತ್ತಿದ್ದಾನೆ. ಹರಪನಹಳ್ಳಿ, ರಾಯದುರ್ಗದವರ ಸ್ನೇಹ ಬಯಸುತ್ತಿದ್ದಾನೆ" ಎಂದು ಇಂತಹ ಅನೇಕ ಸೂಕ್ಷ್ಮ ರಾಜಕೀಯಗಳನ್ನು ತಿಳಿಸುತ್ತಾನೆ. ಕಳ್ಳಿನರಸಪ್ಪ ಶತ್ರುಸೈನ್ಯದ ಮೇಲೆ ಎದುರಾಗುವ ಬದಲು, ಶತ್ರುಗಳನ್ನೇ ಮಿತ್ರರನ್ನಾಗಿಸಿಕೊಂಡು ಎದುರಾಳಿಗಳನ್ನು ದಾಳವಾಗಿ ಬಳಸಿಕೊಳ್ಳುವ ಕುತಂತ್ರಗಳನ್ನು ರೂಪಿಸುತ್ತಿದ್ದನು.
ಸರ್ವಾಧಿಕಾರಿ ಹೈದರಾಲಿ ಅನೇಕ ಸೀಮೆಗಳನ್ನು ಗೆಲ್ಲುತ್ತಾ ಇಕ್ಕೇರಿ, ಹರಪನಹಳ್ಳಿಯರೊಡನೆ ಯುದ್ಧ ಮಾಡಲು ಮದಕರಿಯ ಸಹಾಯ ಕೋರಿದನು. ಮದಕರಿ ಸಭೆ ಕರೆದು ಚರ್ಚಿಸಿದಾಗ, ಎಲ್ಲರೂ ಬೇಡವೆಂದೇ ತೀರ್ಮಾನಿಸಿದರು. ಆದರೆ ನರಸಪ್ಪ ಮಾತ್ರವೇ ಯುದ್ಧಕ್ಕೆ ನೆರವಾಗುವಂತೆ ಅಭಿಪ್ರಾಯ ಸೂಚಿಸಿದನು. ಇದು ಕೂಡ ಒಂದು ನರಸಪ್ಪನ ತಂತ್ರವೇ ಆಗಿತ್ತು. ನವಾಬನಿಗೆ ಸಹಾಯ ನೀಡುವುದರಿಂದ ಸುತ್ತಮುತ್ತಲಿನ ನಾಯಕರ ಬೆಂಬಲ ಕಳೆದುಕೊಳ್ಳುತ್ತಾನೆ, ನಂತರ ನವಾಬನೂ ತಿರುಗಿ ಬೀಳುತ್ತಾನೆ, ಆಗ ದೊರೆಯ ಕಥೆ ಮುಗೀತು ಎಂಬುದು ಆತನ ಲೆಕ್ಕಾಚಾರವಾಗಿತ್ತು. "ನವಾಬರೆಂದರೆ ದೊಡ್ಡ ಮದಕರಿಗೆ ಬೇವು, ಮದಕರಿ ಬೆಲ್ಲ. ಇವರಿಬ್ಬರಲ್ಲಿ ಇವೇ ಒಡಕಿಗೆ ನಾಂದಿಯಾದಲ್ಲಿ ದುರ್ಗಕ್ಕಿನ್ನೆಲ್ಲಿಯ ಉಳಿಗಾಲ?" ಎಂದು ಜಂಪಣ್ಣನಿಗೆ ನರಸಪ್ಪ ಹೇಳುತ್ತಾನೆ.
ಹೈದರಾಲಿಯು ಏಕಾಂಗಿಯಾಗಿ ನಿಡುಗಲ್ ಮುತ್ತಿಗೆಯಲ್ಲಿ ಸೋತನು. ಕಳೆದ ಯುದ್ಧಗಳಲ್ಲಿ ಯಾವ ಸೀಮೆಯನ್ನು ಬಿಟ್ಟುಕೊಡದಿರುವುದು ಮದಕರಿಗೆ ಅಸಮಾಧಾನವೆನಿಸಿತ್ತು. ಜೊತೆಗೆ ಸೆರೆಸಿಕ್ಕ ವೀರರನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ನವಾಬನ ಈ ಕ್ರೂರ ವರ್ತನೆಯ ಬಗ್ಗೆ ಅರಿತ ತರುವಾಯ, ಮದಕರಿ ಮುನಿಸಿಕೊಂಡಿದ್ದನು. ಆದರೆ ಕಳ್ಳಿನರಸಪ್ಪನೇ ಮದಕರಿಯನ್ನು ನಿಡುಗಲ್ಲಿನವರ ಮೇಲೆ ಕೆರಳಿಸಿ, ಯುದ್ಧಕ್ಕೆ ಪ್ರೇರೇಪಿಸಿದನು. ಹೈದರಾಲಿಯು ಮದಕರಿಯನ್ನು ಡೇರೆಗೆ ಕರೆಸಿಕೊಂಡು ಸೋಲಿನಿಂದಾದ ಅಪಮಾನವನ್ನು ತಿಳಿಸಿದನು. ಪಾನ ಸಮಾರಂಭದ ಸಮಯದಲ್ಲಿ ಮದಕರಿ ಮತ್ತು ಹೈದರ್ ಚದುರಂಗವಾಡುತ್ತಾರೆ; ಮೊದಲು ಹೈದರ್ ಬೇಕಂತಲೇ ಸೋಲುತ್ತಾನೆ, ಆನಂತರ ಗೆದ್ದು, ಮದಕರಿಗೆ ನಿಡುಗಲ್ ಮೇಲೆ ದಾಳಿ ಮಾಡಿ ಕಾಮರಾಜನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ತಂತ್ರ ಹೂಡುತ್ತಾನೆ. "ಇದು ನಮ್ಮ ತಂತ್ರವಲ್ಲ, ದುರ್ಗದವರದ್ದೇ ತಂತ್ರ, ಪ್ರಧಾನಿ ಕಳ್ಳಿನರಸಪ್ಪನ ತಂತ್ರ" ಎಂದು ಹೈದರಾಲಿ ಪೂರ್ಣಯ್ಯನಿಗೆ ಹೇಳುತ್ತಾನೆ. ಮದಕರಿಯು ಮೂರೇ ದಿನದಲ್ಲಿ ನಿಡುಗಲ್ ರಾಜನನ್ನು ಸೆರೆಹಿಡಿದು ತಂದು ಹೈದರಾಲಿಗೆ ಒಪ್ಪಿಸುತ್ತಾನೆ. ಆ ಸಂಚಿಗೆ ಮದಕರಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ.
ಹೈದರಾಲಿಯು ಮದಕರಿಯ ಸೈನ್ಯದ ಮೇಲೆ ಮೂರು ತಿಂಗಳು ಎಡೆಬಿಡದೆ ಭಾರಿ ಯುದ್ಧ ನಡೆಸಿದರೂ ದುರ್ಗದ ಕೋಟೆಯ ಒಂದು ಕಲ್ಲೂ ಅಲುಗಲಿಲ್ಲ. ನವಾಬನು ಒಳಗೆ ರೋಷದಿಂದ ಕುದಿದನು. ತನ್ನ ಸೇನೆ ದಿನದಿನವೂ ಶವವಾಗುತ್ತಿರುವುದನ್ನು ಕಂಡು ಹಲುಬಿದನು. ಭೇದೋಪಾಯವೇ ಸರಿಯೆಂದು ತನ್ನ ಆಪ್ತರೊಂದಿಗೆ ಆಲೋಚಿಸಿದನು. ಕಳ್ಳಿನರಸಪ್ಪ ಅದರ ವಹಿವಾಟಿನಲ್ಲಿ ತೊಡಗಿದ್ದನು. ಯುದ್ಧ ಕಾಲದಲ್ಲಿ ಕೈಕಟ್ಟಿ ಕೂತವನಲ್ಲ. ದುರ್ಗದಲ್ಲಿ ಮೂರು ಸಾವಿರ ಯವನ ವೀರರಿದ್ದರು. ಕಳ್ಳಿನರಸಪ್ಪನು ಮುಸ್ಲಿಂ ಸರದಾರರ ಮನಸ್ಸನ್ನು ಕೆಡಿಸುವ ತಂತ್ರ ಹೂಡಿದನು. ಅವರ ಸೇನಾಧಿಕಾರಿಗಳಾದ ಕುತ್ಬುದ್ದೀನ್ ಖಾನ್, ಸಲಾಬತ್ ಖಾನ್, ಮಹಮ್ಮದ್ ಖಾನ್, ಬಿಜಲೆವಗೈರೆ ಖಾನ್ ಮುಂತಾದವರನ್ನು ಕಂಡು ಮಾತನಾಡಿದನು. ನವಾಬನಿಗೆ ಯುದ್ಧದಲ್ಲಿ ನೆರವು ನೀಡಿದರೆ ಭಾರೀ ಜಹಗೀರು ಕೊಡುವುದಾಗಿ ಆಸೆ ಹುಟ್ಟಿಸಿದನು. ಅವರ ಗುರುಗಳಾದ ಖಾಜಿ ಸಾಹೇಬರು ಬರೆದ ಪತ್ರ ತೋರಿಸಿ ಉತ್ತೇಜಿಸಿದನು: "ಪ್ಯಾರೆ ಮುಸ್ಲಿಂ ಬಂಧುಗಳೆ, ನಮಗೆ ಬೇರೆ ಸೀಮೆ ಇಲ್ಲದೆ ಇರುವುದರಿಂದ ಹಿಂದೂಗಳ ಚಾಕರಿ ಮಾಡಿಕೊಂಡಿರಬೇಕಾಗಿದೆ. ಆದರೆ ನಾವೀಗ ಅಸಹಾಯಕರಾಗಿದ್ದೇವೆ. ನಿಮ್ಮ ಗರೀಬ ಪಾಳೇಗಾರ ಏನು ಕೊಟ್ಟಾನು? ನಮ್ಮೊಡನೆ ಕೈಜೋಡಿಸಿ ನೋಡಿ, ಬೇಕಾದ್ದು ಕೇಳಿ ಕೊಟ್ಟೆವು. ಹಿಂದೂ ಜನ ಇಸ್ಲಾಂ ಜನರಿಗೆ ಎಂದೂ ಮಿತ್ರ ಜನ ಅಲ್ಲ. ನಿಮ್ಮ ನವಾಬನಿಗಾಗಿ ಖುರಾನ್ ಕಿತಾಬು ಹಿಡಿದು ಆಣೆ ಮಾಡಿ, ಅಲ್ಲಾ ಒಳ್ಳೆಯದು ಮಾಡುತ್ತಾನೆ" ಎಂದು ಬರೆದ ನವಾಬ್ ಹೈದರಾಲಿಖಾನನ ಪತ್ರವನ್ನು ಕಂಡಾಗ ಯವನ ಸರದಾರರ ಮನಸ್ಸು ಡೋಲಾಯಮಾನವಾಯಿತು. ಈ ಮಾತುಗಳು ಯವನರಲ್ಲಿ ಭೇದವುಂಟಾಗಲು ನಾಂದಿಯಾಯಿತೆನ್ನಬಹುದು.
ಕುತ್ಬುದ್ದೀನ್ ಖಾನ್ ಮಹಾಚತುರನಾಗಿ ಆಲೋಚಿಸಿ ಮಾತನಾಡಿದನು, "ಇಷ್ಟು ದಿವಸ ದೊರೆಗಳ ಉಪ್ಪುಂಡು ಬೆಳೆದಿದೆ ನಮ್ಮ ದೇಹ, ಕತ್ತಿ ಹಿಡಿಯದೆ ಹೋದರೆ ದುರ್ಗದ ಜನ ಏನಂದಾರು? ಮೊಹರಂ ಹಬ್ಬ ಹತ್ತಿರದಲ್ಲೇ ಇದೆ. ನಾವು ಪೀರರಾಗುತ್ತೇವೆ, ಕೊನೆ ದಿವಸ ಮಲ್ಲಾಪುರದ ಕೆರೆಗೆ ಪಂಜಾ ತೊಳೆಯಲು ಹೋಗುತ್ತೇವೆ, ಆಗ ನಮ್ಮನ್ನು ಸೆರೆಹಿಡಿದಂತೆ ನವಾಬರು ನಟಿಸಲಿ. ಆಗಲಾದರೂ ಯಾವ ಅಪರಾಧವಿಲ್ಲದೆ ಯುದ್ಧದಿಂದ ಹಿಂದೆ ಸರಿಯಬಹುದು..." ಎಂದು ಸುಲಭೋಪಾಯ ಸೂಚಿಸಿದನು. ಸಲಾಬತ್ ಖಾನನೂ ಇದನ್ನು ಅನುಮೋದಿಸಿದನು. "ಅಷ್ಟರೊಳಗೆ ನಾವು ನಮ್ಮವರಿಗೆ ಬೇಕಾದವರನ್ನು ಒಲಿಸಿಕೊಂಡು ಬಿಡೋಣ. ಮದ್ದುಗುಂಡು, ಗೋಲಿ ಕಾರಖಾನೆ ಉಸ್ತುವಾರಿ ಇರುವವರನ್ನು ಬಲೆಗೆ ಹಾಕಿಕೊಳ್ಳೋಣ. ಮದ್ದುಗುಂಡು, ಬಾಣ ಬತ್ತಳಿಕೆಗಳನ್ನು ಕೆಡಿಸಿಡೋಣ. ಮದ್ದುಗಳಿಗೆ ಎಣ್ಣೆ ಸುರಿದು ಹಾಳು ಮಾಡೋಣ. ಕೋವಿಗಳನ್ನು ಮುರಿದು ಹಾಕೋಣ, ಕತ್ತಿ-ಕಠಾರಿಗಳ ಅಲಗನ್ನು ಕೆತ್ತಿ ಹಾಕೋಣ" ಎಂದು ಸಲಾಬತನ ಜಾಣ್ಮೆತನದಿಂದ ವರ್ತಿಸಿದನು. "ಯುದ್ಧಕ್ಕೆ ಹೊರಹೋದವರು ಹಿಂತಿರುಗದಂತೆ ನೋಡಿಕೊಳ್ಳೋಣ" ಎಂದನು ಮಹಮ್ಮದ್ ಖಾನ್. ಕಳ್ಳಿನರಸಪ್ಪನಿಗೆ ಸಂತೋಷದ ಗಳಿಗೆ; ಅವರಿಗೆಲ್ಲಾ ನಗನಾಣ್ಯ, ಜಹಗೀರು ಕೊಡಿಸುವ ಬಗ್ಗೆ, ಮುಂದೆ ದೊರಕಿಸಿಕೊಡಬಹುದಾದ ಅಧಿಕಾರದ ಬಗ್ಗೆ ಭಗವದ್ಗೀತೆ ಹಿಡಿದು ವಾಗ್ದಾನ ಮಾಡಿ, ಅವರ ಕೈಲಿ ಖುರಾನ್ ಹಿಡಿಸಿ ವಚನ ತೆಗೆದುಕೊಂಡನು. ಹೀಗೆ ಕಳ್ಳಿನರಸಪ್ಪನು ಸೈನಿಕರಲ್ಲಿ ಧರ್ಮ, ಹಣ, ಅಧಿಕಾರದ ಆಸೆ-ಆಮಿಷಗಳನ್ನು ಬಿತ್ತಿದನು. ಮರಳು ಮಾಡಿ ಯುದ್ಧದಲ್ಲಿ ಹಿಮ್ಮುಖರಾಗುವಂತೆ ಮಾಡಿದ ಕಳ್ಳಿನರಸಪ್ಪ ಮದಕರಿ ಸಾವಿಗೆ ಕಾರಣನಾಗುತ್ತಾನೆ. ಕೊನೆಗೆ ಹೈದರಾಲಿಯಿಂದಲೇ ವಿಶ್ವಾಸಘಾತಕತನದ ಮೂಲಕ ಕಳ್ಳಿನರಸಪ್ಪ ಕೊಲ್ಲಲ್ಪಡುತ್ತಾನೆ.
ಇತಿಹಾಸದಲ್ಲಿ ರಾಜರ ಚರಿತ್ರೆಯನ್ನು ಗಮನಿಸಿದರೆ ತಮ್ಮ ಲಾಭಕ್ಕಾಗಿಯೇ ಆಡಳಿತ ನಡೆಸಿದವರು ಅನೇಕರು. ಮದಕರಿಯ ಜೊತೆಗೆ ಹೈದರಾಲಿ, ಟಿಪ್ಪುವಿನ ಸ್ನೇಹ ಸಂಬಂಧ ತಮ್ಮ ಹಿತಾಸಕ್ತಿಗೆ ಮಾತ್ರವೇ ಆಗಿತ್ತು. ತಂತ್ರ-ಪ್ರತಿತಂತ್ರ, ಕುಟಿಲ ನೀತಿ, ರಾಜತಾಂತ್ರಿಕತೆ ಈ ಅಂಶಗಳ ಹಿನ್ನೆಲೆಯಲ್ಲಿ ಕಳ್ಳಿನರಸಪ್ಪ, ಹೈದರಾಲಿ, ಟಿಪ್ಪು, ಗಂಡುಗಲಿ ಮದಕರಿನಾಯಕನ ಶತ್ರು ಪಾಳೇಗಾರರ ಸಂಚಿನ ರಾಜಕಾರಣದ ನೆಲೆಗಳನ್ನು ಗುರುತಿಸಬಹುದು.