ಅಂಕಣ ಬರಹಗಳಲ್ಲಿ ಸಾಹಿತ್ಯ - ಸಾಮಾಜಿಕ ಸ್ಪಂದನೆಗಳು.
Authors/Creators
- 1. ಸಹಾಯಕ ಪ್ರಾಧ್ಯಾಪಕರು, ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು.
Description
ಅಮೂರ್ತ:
ಕನ್ನಡ ಸಾಹಿತ್ಯದಲ್ಲಿ ಇಂದು ಅಂಕಣ ಬರಹಗಳು ಹಲವು ವೈವಿಧ್ಯಮಯ ಸೃಷ್ಟಿಗೆ ಕಾರಣವಾಗಿವೆ. ವಿವಿಧ ಕ್ಷೇತ್ರಗಳನ್ನು ಸಾಹಿತ್ಯದ ಮಡಿಲಿಗೆ ತುಂಬಿಕೊಳ್ಳುವ ಸ್ಫುಟತೆಯನ್ನು ಗಳಿಸಿಕೊಂಡಿರುವುದು ಮಾತ್ರವಲ್ಲದೆ ಕಾಲದ ವೇಗಕ್ಕೆ ತನ್ನ ವ್ಯಾಪ್ತಿ ಹಾಗೂ ದೃಷ್ಟಿಕೋನದ ಸುಲಭತೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾ ಸಾಗುತ್ತಿದ್ದು, ಬಹು ಪ್ರಚಲಿತ ಸಾಹಿತ್ಯ ಪ್ರಕಾರವಾಗಿದೆ.
ಇತ್ತೀಚೆಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯ ಮಿತಿಯ ಜಗತ್ತಿಗಾಗಿ ಸಿದ್ಧವಾಗುತ್ತಿರುವ ಆಕರ್ಷಣೀಯ ಬರಹಗಳು, ಕೈಪಿಡಿಗಳು, ಲೇಖನಗಳು ಸಾಹಿತ್ಯ ಅಧ್ಯಯನಕ್ಕೆ ಅಮೂಲ್ಯವಾಗಿರುವಂತೆ, ಅಂಕಣ ಬರಹಗಳು ವಿಷಯ, ವಿಚಾರ ಹಾಗೂ ವಿವಿಧ ಚಿಂತನೆಗಳ ಮೂಲಕ ಮಾಹಿತಿಯ ಜೊತೆಗೆ ವಿವೇಚನೆ, ವಿಶ್ಲೇಷಣೆಗೊಳಪಡಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವ ಬೀರಿವೆ. ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ, ರಾಜಕೀಯ, ಸುದ್ದಿ, ಕ್ರೀಡೆ, ಪ್ರವಾಸ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಛಾಪೂ ಮೂಡಿಸಿವೆ. ಒಂದು ಅರ್ಥದಲ್ಲಿ ಅಂಕಣ ಬರಹಗಳನ್ನು ಜ್ಞಾನಾರ್ಜನೆಗೆ, ಸೂಕ್ತ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ.
ಸಾಹಿತ್ಯದ ಇನ್ನಿತರ ಪ್ರಕಾರಗಳಲ್ಲಿ ಆಗುತ್ತಿರುವ ಪ್ರಯೋಗಗಳಂತೆಯೇ ಅಂಕಣ ಬರಹಗಳಲ್ಲಿಯೂ ವಿಭಿನ್ನ ಪ್ರಯೋಗಗಳು ಕಾಣಿಸಿಕೊಳ್ಳುತ್ತಿವೆ. ಪತ್ರಿಕಾ ಬರಹಗಳಲ್ಲಿ ವಿಶೇಷವಾದ ಅಂಕಣಗಳನ್ನು ಪರಿಚಯಿಸುತ್ತಾ, ಸಮಾಜವನ್ನು ವಿಶ್ಲೇಷಣೆಗೊಳಪಡಿಸುವುದನ್ನು ಕಾಣಬಹುದು. ಭಾರತೀಯ ಭಾಷೆಗಳಲ್ಲೂ, ಪ್ರಪಂಚದ ವಿವಿಧ ಭಾಷೆಗಳಲ್ಲೂ ತಮ್ಮ ಪರಿಸರದ ಮೂಲಕ ವಿಶ್ವ ವಿಶ್ಲೇಷಣೆಗೆ ತೊಡಗಲು ಅಂಕಣ ಸಾಹಿತ್ಯವನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ. ಈ ದೃಷ್ಟಿಕೋನಗಳಿಂದ ವಿವೇಚಿಸಿದಾಗ ಅಂಕಣ ಸಾಹಿತ್ಯದ ಚರಿತ್ರೆ, ಬೆಳವಣಿಗೆಯ ಧೀರ್ಘ ವಿಶ್ಲೇಷಣೆಯು ಮಹತ್ವದ್ದಾಗಿ ಕಂಡುಬರುತ್ತದೆ.
ಮುಖ್ಯ ಪದಗಳು: ಸಾಹಿತ್ಯಚಿಂತನೆ, ಶೈಕ್ಷಣಿಕಚಿಂತನೆ, ಸಾಮಾಜಿಕ ಸ್ಪಂದನೆ, ಮಹಿಳಾಸಂವೇದನೆ, ಪತ್ರಿಕೆ ಬರಹಗಳು
ಪ್ರಸ್ತಾವನೆ:
ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ಅಂಕಣ ಬರಹಗಳು ಒಂದು ವಿಶಿಷ್ಠ ಪ್ರಕಾರವಾಗಿದ್ದು, ನಿರ್ಧಿಷ್ಟವಾದ ಶೀರ್ಷಿಕೆಯನ್ನು ಒಳಗೊಂಡ, ನಿಯತವಾಗಿ ಬರೆಯುವ ವಿಚಾರ ಚಿಂತನೆಯ ಬರಹವನ್ನೆ ಅಂಕಣ ಬರಹವೆಂದು ಹೇಳಲಾಗಿದೆ. ಪತ್ರಿಕೆ, ನಿಯತಕಾಲಿಕೆಗಳಲ್ಲಿ ವಿವಿಧ ಮಾದರಿಗಳಲ್ಲಿ ಪ್ರಕಟಗೊಳ್ಳುವ ಈ ಅಂಕಣ ಬರಹಗಳು ಸಮಕಾಲೀನ ವಿಷಯ ವಿದ್ಯಮಾನಗಳನ್ನೊಳಗೊಂಡ ವಿಭಿನ್ನ ಶೈಲಿಯ ಲೇಖನಗಳಾಗಿವೆ. ತಾತ್ವಿಕತೆ ಹಾಗು ಚಿಂತನೆಗಳ ಆಧಾರದ ಮೇಲೆ ರಚಿತವಾಗಿ ಓದುಗರಲ್ಲಿ ತಮ್ಮದೇ ಆದ ಸ್ಥಾನವನ್ನು ಅಂಕಣ ಬರಹಗಳು ಪಡೆದಿವೆ.
‘ಅಂಕಣ’ ಎಂದರೆ ಎರಡು ಕಂಬಗಳ ನಡುವಿನ ಪ್ರದೇಶ ಎಂಬುದು ನಿಘಂಟು ಕೊಡುವ ಅರ್ಥ, ಇಂಗ್ಲೀಷ್‌ನಲ್ಲಿ ಇದನ್ನು `ಕಾಲಂ’ ಎಂದು ಬಳಸಲಾಗಿದೆ. “ಒಂದು ನಿರ್ಧಿಷ್ಟವಾದ ಚೌಕಟ್ಟಿನಲ್ಲಿ ಒಬ್ಬ ಬರಹಗಾರ ತನ್ನ ವಿಚಾರಧಾರೆಯನ್ನು ಪತ್ರಿಕೆಯೊಂದರಲ್ಲಿ ಕಾಲದ ಮಿತಿಗೆ ಒಳಪಟ್ಟು ನಿರ್ಧಿಷ್ಟ ಪ್ರಮಾಣದ ಶಬ್ಧಗಳ ಮಿತಿಯಲ್ಲಿ ಹೇಳಬಹುದಾದ ಬರಹವನ್ನು ಸಾಹಿತ್ಯಕವಾಗಿ ಅಂಕಣ ಎಂದು ವ್ಯಾಖ್ಯಾನಿಸಬಹುದು.” (ಡಾ.ವಿದ್ಯಾಶಂಕರ. ಅಂಕಣ- ಮುನ್ನುಡಿ)
ಅಂಕಣವೆಂದರೆ ವಿಷಯ, ವಿಚಾರ, ವಿಮರ್ಶೆ, ಸಂಶೋಧನೆ, ಅಧ್ಯಯನ ಮೊದಲಾದ ಸೂಕ್ಷ್ಮ ಒಳನೋಟಗಳನ್ನು ಸೂಕ್ಷ್ಮವಾಗಿ ತೆರದಿಡುವ ಒಂದು ಚೌಕಟ್ಟಾಗಿದೆ. ಪ್ರಮುಖ ವಿಷಯಗಳನ್ನು ವಿಂಗಡಿಸಿ ಕೊಂಡು ಆಯಾ ಕ್ಷೇತ್ರದಲ್ಲಿ ಪರಿಣಿತರಾದವರು ವಿಶ್ವದೊಂದಿಗೆ ತಮ್ಮನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಅನುವಾದ ಹಾಗು ಅಂತರ್ಜಾಲದ ಹೊಸ ಬದಲಾವಣೆಗಳ ದಿಕ್ಸೂಚಿಯಲ್ಲಿ ವಿಶ್ವಸಾಹಿತ್ಯವಾಗಿ, ಸುಲಭವಾಗಿ ಓದಲು ಎಲ್ಲರಿಗು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಎಲ್ಲರೊಂದಿಗೂ ತಮ್ಮ ಚಿಂತನೆಗಳನ್ನು ಗುರುತಿಸಿಕೊಳ್ಳುವ ವೇದಿಕೆಯಾಗಿ ಅಂಕಣ ಸಾಹಿತ್ಯದ ಸ್ವರೂಪ ಪ್ರತಿಬಿಂಬಿಸುತ್ತಿದೆ.
ಒಟ್ಟಾರೆ ಅಂಕಣ ಸಾಹಿತ್ಯವು ಆಯಾಕಾಲದ ವಾಸ್ತವಿಕ ಸ್ವರೂಪವನ್ನು ಕಟ್ಟಿಕೊಡುವ ಶೈಲಿಯಾಗಿದೆ. ಒಂದು ನಿರ್ಧಿಷ್ಟ ವಿಷಯ ಕುರಿತು ಎಲ್ಲಾ ಆಯಾಮಗಳಲ್ಲೂ, ಮುಖ್ಯವಾಗಿ ವಾಸ್ತವಕ್ಕೆ ಅಗತ್ಯವಾದ ವಿಚಾರಗಳೊಂದಿಗೆ ತಾರ್ಕಿಕವಾಗಿ ಚರ್ಚಿಸುವ ನಿರ್ಧಿಷ್ಟ ವ್ಯಾಪ್ತಿಯ ಬರಹ ಎಂದು ಗುರುತಿಸಬಹುದಾಗಿದೆ.
ಅಂಕಣ ಬರಹಗಳ ಹಿನ್ನೆಲೆ:
ಅಂಕಣ ಬರಹಗಳ ಉದಯವು ಪತ್ರಿಕೋದ್ಯಮದ ಪ್ರಾರಂಭದೊಂದಿಗೆ ಬೆಳೆದಿದೆ ಎಂದು ಗುರುತಿಸಲಾಗಿದೆ. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಂಕಣ ಬರಹದ ರೂಪದಲ್ಲಿ ಅನೇಕ ಬರಹಗಳು ಆಂಗ್ಲಭಾಷೆಯ ಪ್ರಮುಖ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಆರಂಭದಲ್ಲಿ ಡಿಕ್‌ಸನ್‌ನ ``Letters from a Farmer'' ಪೆನ್ಸಿಲ್ವೇನಿಯಾ ಕ್ರಾನಿಕಲ್’ನಲ್ಲಿ ಹಾಗೂ ಜೇಮ್ಸ್ ರನ್ಯೂ ಇಂಗ್ಲೆಂಡ್ ಕೋರೆಂಟ್' ನಲ್ಲಿನ ಅಂಕಣಗಳು ಗಮನಸೆಳೆದವು.
ದೇಶೀಯ ನೆಲೆಯಲ್ಲಿ ಭಾರತದಲ್ಲಿ ಅಂಕಣ ಬರಹಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಣಿಸಿಕೊಂಡವು. ಮೊದಲ ಸುದ್ದಿ ಪತ್ರಿಕೆಯಾಗಿದ್ದ `ದಿ ಬೆಂಗಾಲ್ ಗೆಜೆಟ್'ನಲ್ಲಿ ರಾಜಕೀಯ ವಿಷಯಗಳಿಗೆ ಮೀಸಲಾದ ಅಂಕಣವೊಂದು ಪ್ರಕಟವಾಗುತ್ತಿದ್ದರೂ ಕ್ರಾಂತಿಕಾರಿ ಬರಹಗಳಿಗೆ ಇದರಲ್ಲಿ ಅವಕಾಶವಿರಲಿಲ್ಲ. ಮುಖ್ಯವಾಗಿ ರಾಜಕೀಯ ವಿಚಾರಗಳು ಇದರಲ್ಲಿ ಚರ್ಚಿತವಾಗುತ್ತಿದ್ದವು. ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೆಗಳ ಸಂಖ್ಯೆಯು ವೃದ್ಧಿಸಿ, ಪ್ರಾಂತೀಯ ಭಾಷೆಗಳ ಪತ್ರಿಕೆಗಳಲ್ಲಿಯೂ ದೈನಂದಿನ ಅಂಕಣಗಳು ಸ್ಥಾನ ಪಡೆದುಕೊಂಡಿವೆ.
ಕನ್ನಡ ಭಾಷೆಯಲ್ಲಿ ಅಂಕಣ ಬರಹಗಳ ಬೆಳವಣಿಗೆಯತ್ತ ಗಮನಹರಿಸಿದಾಗ ಅಂಕಣ ಸಾಹಿತ್ಯಕ್ಕೆ ಸುದೀರ್ಘವಾದ ಪರಂಪರೆಯೆ ಕಂಡು ಬರುತ್ತದೆ. ಸಂಪಾದಕೀಯ ಬರಹಗಳು, ಸಾಹಿತಿಗಳು, ಪತ್ರಕರ್ತರ ಬರಹಗಳು ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರತರಾದವರು ತಮ್ಮದೇ ಆದ ಶೈಲಿಯಲ್ಲಿ ಅಂಕಣಗಳನ್ನು ಬರೆದಿದ್ದಾರೆ.
ಕನ್ನಡದ ಆರಂಭದ ಪತ್ರಿಕೆಗಳ ಸಂಪಾದಕೀಯ ಬರಹಗಳಲ್ಲಿ ಅಂಕಣಗಳು ಗಮನಸೆಳೆದಿವೆ. ಹಿರಿಯ ಲೇಖಕರು ಸಂಪಾದಕರುಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ. ಎಸ್.ರಾಮಚಂದ್ರರಾವ್, ವೈ.ಎನ್.ಕೆ, ಕು.ಶಿ. ಹರಿದಾಸ ಭಟ್ಟರು ಮೊದಲಾದವರ ಸಂಪಾದಕೀಯ ಬರಹಗಳು ಕನ್ನಡ ಅಂಕಣ ಪರಂಪರೆಗೆ ನಾಂದಿಯಾಗಿವೆ. ಇತ್ತೀಚಿನ ದಶಕಗಳಲ್ಲಿ ಡಾ.ಹಾ. ಮಾ. ನಾಯಕ, ಎಚ್.ಎಸ್.ಕೆ, ಎಲ್.ಎಸ್.ಶೇಷಗಿರಿರಾವ್. ಪೂರ್ಣಚಂದ್ರ ತೇಜಸ್ವಿ., ಕೀರ್ತಿ ನಾಥ ಕುರ್ತುಕೋಟಿಯವರ ಬರಹಗಳು `ಅಂಕಣಗಳು’ ಸಹ ಪ್ರಭಾವಿ ಮಾಧ್ಯಮ ಎಂಬುದನ್ನು ನಿರೂಪಿಸಿವೆ.
ಸಾಹಿತ್ಯ ಸಂವೇದನೆ:
೧೯ನೇ ಶತಮಾನದ ಆರಂಭದ ದಶಕಗಳ ಕನ್ನಡ ಸಾಹಿತ್ಯದಲ್ಲಿ ಪತ್ರಿಕೆಗಳ ಪಾತ್ರ ಗಮನೀಯವಾಗಿದ್ದು, ಪತ್ರಿಕೋದ್ಯಮದ ಬೆಳವಣಿಗೆಯೊಂದಿಗೆ ಸಾಹಿತ್ಯ ಸಮೃದ್ಧಿಯಾಯಿತು. ಭಾಷೆ ಬೆಳೆಯಿತು. ಅರಿವು ವಿಸ್ತರಿಸಿತು. ವಿಚಾರಪೂರ್ಣ ಲೇಖನಗಳು, ಸಮಾಜ ಸುಧಾರಣ ಚಳುವಳಿಗಳ ಬರಹಗಳು ವಿಸ್ತರಿಸಿದವು. ವಿಭಿನ್ನ ರೀತಿಯ ಪ್ರಯೋಗಗಳು ಕಾಣಿಸಿಕೊಳ್ಳತೊಡಗಿದವು. ಅಂಕಣ ಬರಹಗಳು ವಿಶೇಷ ಸ್ಥಾನವನ್ನು ಪಡೆದುಕೊಂಡು, ಕಾಲಕ್ರಮೇಣದಲ್ಲಿ ತಮ್ಮ ಹರಹು ವಿಸ್ತರಿಸಿಕೊಳ್ಳುತ್ತಾ ಬಂದಿರುವುದನ್ನು ಗಮನಿಸಬಹುದಾಗಿದೆ.
ಅಂಕಣ ಬರಹಗಳ ವಸ್ತು ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಸುತ್ತಲಿನ ಸಾಹಿತ್ಯಕ ಪರಿಸರ ಅಂಕಣಕಾರರನ್ನು ಸ್ಪರ್ಶಿಸುತ್ತದೆ. ತನ್ನ ಸಂಪರ್ಕಕ್ಕೆ ಬಂದ ವ್ಯಕ್ತಿ, ವಿಚಾರಗಳ ಕುರಿತು ಅಂಕಣಕಾರರು ತಮ್ಮ ಬರಹಗಳ ಮೂಲಕ ಆತ್ಮೀಯ ಚಿತ್ರಣ ಕಟ್ಟಿಕೊಡುತ್ತಾರೆ. ಕಥೆ ಹೇಳುವ ಅಥವಾ ಆತ್ಮ ಕಥನ ಬರೆಯುವ ಅಥವಾ ಭಾವಲಹರಿ ಹರಿಸುವ ಹೀಗೆ ಸಾಹಿತ್ಯದ ಹೆಚ್ಚಿನೆಲ್ಲಾ ಪ್ರಕಾರಗಳನ್ನು ಅಂಕಣ ಸಾಹಿತ್ಯದಲ್ಲಿ ಸೇರಿಸಿಕೊಂಡು ಓದುಗರಿಗೆ ಅಪೂರ್ವ ಮಾಹಿತಿಗಳನ್ನು ಒದಗಿಸಿಕೊಡುವುದು ಅಂಕಣ ಬರಹಗಳ ವಿಶಿಷ್ಟತೆಯಾಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಒಂದು ಗಂಭೀರ ಸಾಹಿತ್ಯದ ಪ್ರಕಾರವಾಗಿ ಬೆಳೆದು ಬಂದಿರುವ ಅಂಕಣ ಬರಹಗಳ ಪ್ರಕಾರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳಿಗೆ ಒಳಗಾಗುತ್ತಾ ಬದಲಾದ ಕಾಲಮಾನದಲ್ಲಿ ಹೊಸ ಮಾರ್ಗಗಳನ್ನು ಗುರುತಿಸುತ್ತಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೊಸ ನಿಲುವುಗಳನ್ನು ಅಭಿವ್ಯಕ್ತಿಸುತ್ತಿರುವುದು ಕಂಡು ಬರುತ್ತದೆ.
೨೦ನೇ ಶತಮಾನದ ಆರಂಭದಲ್ಲಿ ಕಾಣಿಸಿಕೊಳ್ಳತೊಡಗಿದ ಅಂಕಣ ಪ್ರಕಾವು ಕನ್ನಡ ಪತ್ರಿಕೋಧ್ಯಮದ ಆರಂಭದ ದಿನಗಳಲ್ಲಿ ೧೮೪೩ರ ಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟಣೆಗೊಳ್ಳತೊಡಗಿದವು. ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಸಂಗ್ರಾಮದ ಗುರಿ, ಉದ್ದೇಶಗಳು ಜನರನ್ನು ತಲುಪಲು ಸಹಕಾರಿಯಾದವು.
ಇತ್ತೀಚಿನ ದಶಕಗಳವರೆಗೂ ಅಂಕಣ ಬರಹಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿರುವುದು ತೀರಾಕಡಿಮೆ, ಹಾಗಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಮಕಾಲೀನ ಸಂದರ್ಭಗಳಿಗಷ್ಟೇ ಅಂಕಣ ಬರಹಗಳು ಪ್ರಸ್ತುತ ಎಂಬ ಭಾವನೆಯೇ ಸಾಮಾನ್ಯವಾಗಿತ್ತು. ಆದರೆ ಅಂತಹ ಬರಹಗಳು ಪುಸ್ತಕ ರೂಪದಲ್ಲಿ ಸಂಕಲನ ಗೊಂಡು, ಹೊರಬರತೊಡಗಿದಾಗಲೇ ಅಂಕಣ ಬರಹಗಳ ಸಾಹಿತ್ಯದ ಮೌಲ್ಯ ಅರಿವಾಗತೊಡಗಿದವು. ಬಹುಶಃ ೮೦ರ ದಶಕದವರೆಗೆ ವಿರಳವಾಗಿ ಪ್ರಕಟವಾಗುತ್ತಿದ್ದ ಅಂಕಣ ಬರಹಗಳು ೯೦ರ ದಶಕದವೇಳೆಗೆ ವಿಫುಲವಾಗಿ ಬರತೊಡಗಿದವು. ಅದರೊಂದಿಗೆ ಬರಹಗಳ ಭಾಷೆ, ನುಡಿಗಟ್ಟು ಇವುಗಳಲ್ಲೂ ವೈವಿಧ್ಯತೆ ಕಾಣಿಸತೊಡಗಿತು.
ನವೋದಯ ಸಾಹಿತ್ಯ ಚರಿತ್ರೆಯ ಆರಂಭದಲ್ಲಿಯೇ ನವೋದಯ ಸಾಹಿತ್ಯದ ಹಿರಿಯರನೇಕರು ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. ಅವು ಸಂಪುಟಗಳಾಗಿಯೂ ಹೊರಬಂದು, ಹೊಸದೊಂದು ಸಾಹಿತ್ಯ ಪ್ರಕಾರಕ್ಕೆ ನಾಂದಿಯಾಯಿತು. ಕಡೆಂಗೋಡ್ಲು ಶಂಕರಭಟ್ಟರು, ಹುರುಳಿ ಭೀಮರಾಯರು, ಬೆಟಗೇರಿ ಕೃಷ್ಣಶರ್ಮರು ಮಹತ್ವ ಪೂರ್ಣ ಬರಹಗಳ ಮೂಲಕ ಈ ಪ್ರಕಾರಕ್ಕೆ ಸಾಹಿತ್ಯದ ಸಿಂಚನ ನೀಡಿದರು, ಸಿದ್ದವನಹಳ್ಳಿ ಕೃಷ್ಣಶರ್ಮರ ಬರಹಗಳು ಅಂಕಣ ಸಾಹಿತ್ಯಕ್ಕೆ ತನ್ನದೇ ಆದ ನೆಲೆಬೆಲೆಯನ್ನು ತಂದುಕೊಟ್ಟವು. ಹೀಗೆ ಅಂಕಣ ಬರಹಗಳು ಸಾಹಿತ್ಯದ ಮೆರಗನ್ನು ಪಡೆದು ಕೊಂಡು ೧೯೨೭-೫೩ರ ಅವಧಿಯಲ್ಲಿ ವಿಷಯ ವೈವಿಧ್ಯತೆಯ ಜೊತೆಗೆ ವಿಚಾರ ಪ್ರತಿಪಾದನೆಯ ದೃಷ್ಟಿಯಿಂದಲೂ ಮಂಥನಕ್ಕೊಳಪಟ್ಟು ಮಹತ್ವ ಪಡೆದುಕೊಂಡಿರುವುದನ್ನು ಕಾಣುತ್ತೇವೆ.
೧೯೨೭ ರಿಂದ ರಾಷ್ಟçಬಂಧು ಪತ್ರಿಕೆಗೆ ಅಂಕಣ ಬರೆಯುತ್ತಿದ್ದ ಕಡೆಂಗೋಡ್ಲು ಶಂಕರಭಟ್ಟರ ಆಯ್ದ ಬರಹಗಳು ಕಡೆಂಗೋಡ್ಲು ಅಗ್ರಲೇಖನಗಳು‘ ಎಂಬ ಸಂಪುಟದಲ್ಲಿ ಸಂಕಲನಗೊಂಡು ಪ್ರಕಟವಾಗಿವೆ. ಇಲ್ಲಿನ ಓಟ್ಟು ಬರಹಗಳನ್ನು ರಾಜಕೀಯ, ವ್ಯವಸಾಯ, ಸಾಮಾಜಿಕ ಸಮಸ್ಯೆಗಳು, ಶಿಕ್ಷಣಕ್ಷೇತ್ರ, ಭಾಷೆ, ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವರ್ಗೀಕರಿಸಿಕೊಂಡು ವಿವರಿಸಲಾಗಿದೆ. ಸಿದ್ಧವನಹಳ್ಳಿ ಕೃಷ್ಣಶರ್ಮರು, ಮಾತಿನಮಂಟಪ’. ಕನ್ನಡದ ಕಣ’ ಶೀರ್ಷಿಕೆಯಲ್ಲಿ ಬರೆದು ಅಂಕಣ ಸಾಹಿತ್ಯಕ್ಕೆ ನಿರ್ಧಿಷ್ಟರೂಪವನ್ನು ತಂದುಕೊಟ್ಟಿದ್ದಾರೆ. ಕು.ಶಿ. ಹರಿದಾಸಭಟ್ಟರು, ನಿರಂಜನರು, ಹಾ. ಮಾ. ನಾಯಕ ಮುಂತಾದವರು ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರಿಂದಾಗಿ ಅಂಕಣ ಬರವಣಿಗೆಗಳು ಪತ್ರಿಕಾ ಕ್ಷೇತ್ರದ ಪ್ರಸ್ತುತೆಯ ಜೊತೆಗೆ ಸಾಹಿತ್ಯ ಕ್ಷೇತ್ರದ ಶಾಶ್ವತತೆಯನ್ನು ಮೈಗೂಡಿಸಿಕೊಳ್ಳುವಂತಾಯಿತು’. (ದೇ ಜ ಗೌ ಸಂಪುಟ, ಪುಟ-೪೨೮)
ಜೆ.ಪಿ. ರಾಜರತ್ನಂರವರಂತಹ ಹಿರಿಯ ಸಾಹಿತಿಗಳು ಅಂಕಣ ಬರಹಗಳ ಮೂಲಕ ವ್ಯಕ್ತಿತ್ವ ವಿಕಸನ ಮೂಡಿಸುವಂತಹ ಕಾರ್ಯವನ್ನು ಮಾಡುತ್ತಿದ್ದರು. ಸಾಹಿತ್ಯದ ಅಭಿರುಚಿಯನ್ನು ಬಿಂಬಿಸುತ್ತದ್ದ ಬೌದ್ಧ, ಜೈನ ಸಾಹಿತ್ಯಗಳ ಕಥೆಗಳನ್ನು ಇತರ ಧರ್ಮಗಳ ಬೋಧಪ್ರದ ಕಥೆಗಳನ್ನು ಓದುಗರಿಗೆ ಪರಿಚಯಿಸಿದರು. ಅಂಕಣ ಬರಹಗಳಿಗೆ ದೊಡ್ಡರಂಗೇಗೌಡರ ಸಾಹಿತ್ಯ ಪರಿಧಿ’, ರಾಜರತ್ನಂರವರ ವಿಚಾರರಶ್ಮಿ’ ಅಂಕಣಗಳು ಸಾಹಿತ್ಯದ ಸಿಂಚನ ಒದಗಿಸಿವೆ. ಪಾ. ವೆಂ. ಆಚಾರ್ಯರ ವಿಡಂಬನಾತ್ಮಕ ಹಾಗೂ ವಿನೋದಾತ್ಮಕ ಬರವಣಿಗೆಗಳು, ವಿಶ್ವಕರ್ನಾಟಕದಲ್ಲಿ ತಿರುಮಲೆ ತಾತಾಚಾರ್ಯರ 'ಬಡಬೋರೆಗೌಡ' ಎಂಬ ಅಂಕಣಗಳು ಸಾಹಿತ್ಯಿಕ ಮೌಲ್ಯಗಳು ಹೆಚ್ಚಾಗಿದ್ದರಿಂದ ಅಂಕಣ ಸಾಹಿತ್ಯಕ್ಕೆ ಹೊಸ ಮೆರಗು ತಂದು ಕೊಟ್ಟವು.
ನವೋದಯ ಆದ್ಯ ಬರಹಗಾರ್ತಿಯರಾದ ತಿರುಮಲಾಂಬ, ಕಲ್ಯಾಣಮ್ಮ, ಸ್ವತಃ ತಮ್ಮದೇ ಪತ್ರಿಕೆಗಳನ್ನು ಹೊರತಂದು ಅಂಕಣಗಳನ್ನು ಬರೆದು, ಇತರ ಮಹಿಳೆಯರಿಗೂ ಬರೆಯಲು ಪ್ರೇರೇಪಿಸಿ ಸಾಹಿತ್ಯಾಭಿರುಚಿಯನ್ನು ವೃದ್ಧಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ. ತಿರುಮಲಾಂಬ ಸತಿಹಿತೈಷಿಣಿ’ ಎಂಬ ತಮ್ಮದೇ ಆದ ಗ್ರಂಥಮಾಲೆಯನ್ನು ಸ್ಥಾಪಿಸಿ, ಸ್ವತಃ ಅಂಕಣ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಕರ್ನಾಟಕ ನಂದಿನಿ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ಈ ಪತ್ರಿಕೆಯಲ್ಲಿ ಕನ್ನಡದ ರನ್ನಗನ್ನಡಿ' ಎಂಬ ಒಂದು ಪುಟಗಳ ಅಂಕಣವನ್ನು ಕನ್ನಡದ ಕೈಂಕರ್ಯ ನಡೆಸಿದವರಿಗಾಗಿಯೇ ಮೀಸಲಾಗಿರಿಸಿದ್ದರು.
ಸರಸ್ವತಿ ಪತ್ರಿಕೆ ಆರಂಭಿಸಿದ ಕಲ್ಯಾಣಮ್ಮ, ಸರಸ್ವತಿ ಪತ್ರಿಕೆಯ ನಮ್ಮ ನುಡಿಗನ್ನಡಿ’ ಅಂಕಣದಲ್ಲಿ ಪ್ರಕಟವಾದ ಮಾತೆಯರು ವಾಚನಾಭಿರುಚಿಯೂ' ಶೀರ್ಷಿಕೆಯ ಲೇಖನದಲ್ಲಿ ಮಹಿಳೆಯರ ಸಾಹಿತ್ಯ ಆಸಕ್ತಿ ಮತ್ತು ಅವರಿಗೆ ಬೇಕಾದ ಬೆಂಬಲದ ಕುರಿತು ಚರ್ಚಿಸಿ, "ನಮ್ಮ ಅನೇಕ ಅಕ್ಕತಂಗಿಯರಿಗೆ ವಾಚನಾಭೀರುಚಿಯೇನೋ ಇದೆ, ಅದು ಪೂರ್ಣವಾಗಿಲ್ಲ ಕಾರಣ ಕನ್ನಡ ಸಾಹಿತ್ಯದ ಸಮಾಜವು ಅವರಿಗೆ ತಕ್ಕ ಅನುಕೂಲಗಳನ್ನು ಕಲ್ಪಿಸಿಕೊಡಲಿಲ್ಲ. ಹಿಂದಿಭಾಷೆಯಲ್ಲಿ ಮಾಸಪತ್ರಿಕೆ ಚಾಂದ್' ಸ್ತ್ರೀ ಸಾಹಿತ್ಯಮಯಿ ಪತ್ರಿಕೆಯ ನೂರಾರು ಸಂಚಿಕೆಗಳು ವರ್ಷಾಂಪ್ರತಿ ಧರ್ಮಾರ್ಥವಾಗಿ ಹಂಚಲ್ಪಡುತ್ತವೆ. ಅದು ಆ ಓದುಗ ಮಹಿಳೆಯರ ವಾಚನಾಭಿರುಚಿಯನ್ನು ಹೆಚ್ಚಿಸಿದೆ. ಕನ್ನಡ ಸಾಹಿತ್ಯದಲ್ಲಿ ಅಂತಹ ಮಾರ್ಪಾಡಾಗುವುದೋ” ತಿಳಿಯದು ಎಂಬ ಖಿನ್ನತೆಯನ್ನು ವ್ಯಕ್ತಪಡಿಸಿದ್ದಾರೆ. (ಸರಸ್ವತಿ ಪತ್ರಿಕೆ, ಸಂಪಾದಕೀಯ ಅಂಕಣ, ಸಂಚಿಕೆ-೧. ಸಂಪುಟ-೨೯, ನವೆಂಬರ್ ೧೯೪೯.) ಸಾಹಿತ್ಯ ಸಾಂಸ್ಕೃತಿಕ ಆಗುಹೋಗುಗಳ ವರದಿಯಂತೆ ಪ್ರಕಟವಾಗಿ ಸರಸ್ವತಿ ಪತ್ರಿಕೆಯ ನಮ್ಮ ನುಡಿಗನ್ನಡಿ' ಅಂಕಣವು ಕುತೂಹಲಕರ ಅಂಶಗಳನ್ನು ಒದಗಿಸುತ್ತಿತ್ತು.
`ಸಾಹಿತ್ಯವನ್ನಾಗಲಿ, ಚರಿತ್ರೆಯನ್ನಾಗಲಿ, ಸಾಮಾಜಿಕ ರಚನೆಯನ್ನಾಗಲಿ ಹೊಸ ದೃಷ್ಟಿಕೋನದಿಂದ ವೀಕ್ಷಿಸಿದಾಗ ಅವುಗಳ ಸ್ವರೂಪವೇ ಬದಲಾಗುತ್ತದೆ.’ ಎನ್ನುವಂತೆ ನಂತರದ ಪ್ರಗತಿಶೀಲ ತಲೆಮಾರಿನಲ್ಲಿ ಪ್ರಗತಿಪರ ಚಿಂತನ ನೆಲೆಯಿಂದ ವಿಶ್ಲೇಷಣೆಗೊಂಡ ಹೊಸ ದೃಷ್ಟಿಕೋನಗಳ ನಿರಂಜನರು, ವ್ಯಾಸರಾಯ ಬಲ್ಲಾಳರು, ಗೌರೀಶ ಕಾಯ್ಕಿಣಿ, ಚಂದ್ರಶೇಖರ ಪಾಟೀಲರು, ಎಚ್.ಎಸ್.ಕೆ. ಮೊದಲಾದವರು ಬರಹಗಳು ಗಮನಸೆಳೆದವು.
ಹೊಸ ದೃಷ್ಟಿಕೋನಗಳ ನಿರಂಜನರ ಬರಹಗಳಲ್ಲಿ ಮೊದಲ ಅಂಕಣ ೧೯೬೫ರಲ್ಲಿ ಪ್ರಜಾಮತ ವಾರಪತ್ರಿಕೆಯ ಸಾಪ್ತಾಹಿಕದಲ್ಲಿ ಸರೂ ಕೇಳಿದೆಯಾ' ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾಗಿ, ನಂತರದ ದಿನಗಳಲ್ಲಿ ಉಷಾ’ ಪತ್ರಿಕೆಯಲ್ಲಿ ಸರೋಜ ಸಂಚಯ', ಜನಶಕ್ತಿ ಪತ್ರಿಕೆಯಲ್ಲಿ 'ಸಾಧನ ಸಂಚಯ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು. ಹಾಗೂ ಚಿತ್ರಗುಪ್ತ'ದಲ್ಲಿ ಪ್ರಶ್ನೋತ್ತರ ಅಂಕಣ ಓದುಗರೊಡನೆ ಐದು ನಿಮಿಷ ಹಾಗೂ ಕಾಲಕ್ಷೇಪ, ಸಾಹಿತ್ಯ ಸಮೀಕ್ಷೆ ಆನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಬೇವು ಬೆಲ್ಲ ಮತ್ತು ಕರ್ಮವೀರ’ ದಲ್ಲಿ ರಾಜಧಾನಿಯಿಂದ' ಹೀಗೆ ವಿವಿಧ ಶೀರ್ಷಿಕೆಯಲ್ಲಿ ಸುಮಾರು ಎರಡು ಸಾವಿರದಷ್ಟು ಅಂಕಣಗಳನ್ನು ಬರೆದು ದಾಖಲೆ ನಿರ್ಮಿಸಿದ್ದಾರೆ. “ನಿರಂಜನರ ಅಂಕಣಗಳು ಅವರ ವ್ಯಕ್ತಿತ್ವ, ಮನೋಧರ್ಮಗಳಲ್ಲಾದ ವಿಕಸನದ ಹಲವು ಹಂತಗಳ ದಿಕ್ಸೂಚಿ ಮಾತ್ರವಲ್ಲ, ಆಧುನಿಕ ಸಾಹಿತ್ಯ ಚಿಂತನಕಾರರಿಗೆ ಸಮೃದ್ಧ ಆಕರ” ಎಂದು ಹೇಳಲಾಗಿದೆ. (ಹೊಸಗನ್ನಡ ಸಾಹಿತ್ಯ ರೂಪಗಳು. ಪು-೧೮೬)
ಕೀರ್ತಿನಾಥ ಕುರ್ತುಕೋಟಿಯವರ ಅಂಕಣ ಬರಹಗಳಲ್ಲಿ ಮುಖ್ಯವಾಗಿ ಸಾಹಿತ್ಯ-ಸಂಸ್ಕೃತಿ ಕುರಿತ ಚಿಂತನೆಗಳನ್ನು ಕಾಣುತ್ತೇವೆ. ಅವರು ಸಮ್ಮುಖ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳು `’ಉರಿಯ ನಾಲಗೆ” ಎಂಬ ಪುಸ್ತಕರೂಪದಲ್ಲಿ ಪ್ರಕಟಣೆಯಾಗಿವೆ. ಅಂಕಣ ಬರಹಗಳ ಸಂಕಲನವಾಗಿ ಹೊರಬಂದಿರುವ ಈ ಕೃತಿಯಲ್ಲಿ ಪ್ರತಿಯೊಂದು ಲೇಖನದ ವಸ್ತು ವೈವಿದ್ಯಮಯವಾಗಿದ್ದರೂ ಅವುಗಳ ಹಿಂದಿನ ಚಿಂತನೆಯ ಕ್ರಮ ಎಕಸೂತ್ರವಾಗಿರುವಂತೆ ನೋಡಿಕೊಳ್ಳಲಾಗಿದೆ. ಎಂಬದನ್ನು ಸ್ವತಃ ಲೇಖಕರೇ ಹೇಳಿದ್ದಾರೆ. ಇಲ್ಲಿನ ಬರಹಗಳು ಯಾವುದೇ ವಿಷಯಗಳಿಗೆ ಸಂಬಂಧಿಸಿದವುಗಳಾಗಲಿ ಅಲ್ಲೆಲ್ಲಾ ವಿಮರ್ಶೆಯ ಧಾಟಿ ಕಂಡುಬರುತ್ತದೆ. ಕುರ್ತುಕೋಟಿಯವರು ಸೂಕ್ಷ್ಮಪ್ರಜ್ಞೆಯ ವಿಮರ್ಶಕರಾಗಿರುವುದು ಇದಕ್ಕೆ ಕಾರಣವಿರ ಬಹುದು. ಅವರ ಸಾಹಿತ್ಯ ವಿಮರ್ಶೆ ಎಂದರೆ ಸಂಸ್ಕೃತಿ ಚಿಂತನೆಯಾಗಿರುತ್ತದೆ. ಸಂಸ್ಕೃತಿ ಚಿಂತನೆ ಅದು ಸಾಹಿತ್ಯ ವಿಮರ್ಶೆಯೂ ಆಗಿರುತ್ತದೆ. ಈ ವೈಶಿಷ್ಟ್ಯವನ್ನು ಇಲ್ಲಿಯೂ ನಾವು ಗಮನಿಸಬಹುದು. ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಕಲೆ, ಆಚರಣೆ, ಕಾವ್ಯಮೀಮಾಂಸೆ, ರಾಜಕೀಯ, ಸಮಕಾಲೀನ ವಿದ್ಯಮಾನ, ವ್ಯಕ್ತಿಚಿತ್ರ ಇವೆಲ್ಲವುಗಳಿಗೆ ಸಂಬಂಧಿಸಿದ ಚರ್ಚೆ-ಚಿಂತನೆಗಳು ಇವರ ಅಂಕಣ ಬರಹಗಳಲ್ಲಿವೆ.
ಅಂಕಣಸಾಹಿತ್ಯ ಎಂದಾಕ್ಷಣ ಕಾಣಿಸುವ ಪ್ರಮುಖ ಹೆಸರು ಎಚ್ಚೆಸ್ಕೆರವರದು, ಸುಮಾರು ಆರು ದಶಕಗಳಷ್ಟು ಧೀರ್ಘಕಾಲ ಅಂಕಣಗಳನ್ನು ಬರೆದು ಅಂಕಣ ಬ್ರಹ್ಮ’ ಎಂದು ಗುರುತಿಸಲ್ಪಟ್ಟಿರುವ ಇವರು ಅಂಕಣಬರಹಗಳನ್ನೇ ಸೃಜನಶೀಲವಾಗಿಸಲು ಹೊರಟವರು, ಗದ್ಯದಲ್ಲಿ ಕಾವ್ಯ ಹರಿಯುವಂತೆ ಬರೆದು ತೋರಿಸಿದವರು. ವ್ಯಕ್ತಿ ವಿಷಯ’ ಸುಧಾ ವಾರಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ಅಂಕಣ ಚಿಕ್ಕದಾದ, ಚೊಕ್ಕವಾದ ವಾಕ್ಯಗಳಿಂದ ಕ್ರಿಯಾಪದಗಳಿಂದ ಕಳಚಿಕೊಂಡಂತಿರುವ ವಾಕ್ಯವಿಶಿಷ್ಟತೆ, ವ್ಯಕ್ತಿಯ ವ್ಯಕ್ತಿತ್ವವನ್ನು ಅಂಕಣ ಬರಹದಲ್ಲಿ ಹಿಡಿದಿಡುವಂತಹ ಗುಣಗಳಿಂದ ಇವರ ಲೇಖನಗಳು ಒಂದು ಅನನ್ಯತೆಯನ್ನು ತುಂಬಿಕೊಡುತ್ತವೆ.
ಲೋಕಾಭಿರಾಮದ ಚಿಂತನಾಪರ ಬರಹಗಾರರಾದ ಕು.ಶಿ. ಹರಿದಾಸಭಟ್ಟರು ಉದಯವಾಣಿಯಲ್ಲಿ ಬರೆಯುತ್ತಿದ್ದ ಬರಹಗಳು ಆರು ಸಂಪುಟಗಳಲ್ಲಿ ಪ್ರಕಟವಾಗಿವೆ. ಈ ಎಲ್ಲ ಸಂಪುಟಗಳಲ್ಲಿ ಸಂಸ್ಕೃತಿ, ಸಾಹಿತ್ಯ, ಕಲೆ, ಅರ್ಥಶಾಸ್ತ್ರ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿರುವ ಇವರು ಸಾಹಿತಿಯಾಗಿ, ಕಲಾವಿಧರಾಗಿ, ರಾಜಕಾರಣಿಗಳ ಬಗೆಗೂ ಬರೆಯುತ್ತಾರೆ.
ಎಪ್ಪತ್ತರ ದಶಕದಲ್ಲಿ ಸಾಹಿತ್ಯ ಚಳುವಳಿಗಳ ಭಾಗವಾಗಿ ಪತ್ರಿಕೆಗಳು ಅಧಿಕಗೊಂಡವು. ಅಲ್ಲದೆ ಪತ್ರಿಕೋದ್ಯಮದಲ್ಲಿ ಮಹಿಳೆಯರು ಮುನ್ನೆಲೆಯಲ್ಲಿ ಕಾಣಿಸಿಕೊಂಡಿದ್ದು ಗಮನೀಯವಾಗಿದೆ. ಅನುಪಮಾ ನಿರಂಜನ, ವಿಜಯಾ, ವೈದೇಹಿ, ಸುಮಿತ್ರಾಬಾಯಿ, ಶ್ರೀಮತಿ ಮೊದಲಾದವರು ಅಂಕಣಗಳನ್ನು ಬರೆದು ಮಹಿಳಾ ಸಂವೇದನೆಯನ್ನು, ಸಾಹಿತ್ಯ ಚಿಂತನೆಗಳನ್ನು ಪ್ರಸ್ತುತಪಡಿಸಿದ್ದಾರೆ. ಶ್ರೀಮತಿಯವರ `ಗೌರಿ ದುಃಖ' ಅಂಕಣ ಹಾಗೂ ಪ್ರಾಧ್ಯಾಪಕಿ ಆರ್.ಇಂದಿರಾರವರ ಅಂಕಣಗಳಲ್ಲಿ ಸಾಹಿತ್ಯ ವಿಮರ್ಶೆಗಳು ಎದ್ದು ಕಾಣಿಸುತ್ತವೆ.
ಅನುಪಮಾರವರು ಡಾ. ಶಿವರಾಮ್‌ರವರ ಕೊರವಂಜಿ’ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು, ಪ್ರಜಾವಾಣಿಯ ವನಿತಾ ವಾಣಿ‘ಗೆ ಕಾಲಂ ಬರೆದ ಅಂಕಣದಲ್ಲಿ ವನಿತೆಯರ ಸಮಸ್ಯೆಗಳಿಗೆ ಪರಿಹಾರ ನೀಡಿ ಸ್ಪಂದಿಸುತ್ತಿದ್ದರು. ಪ್ರಿಯದರ್ಶಿನಿ ಎಂಬ ನಾಮದಲ್ಲಿ ಒಂದು ವರ್ಷಗಳ ಕಾಲ ಬರೆದಿರುವ ಈ ಕಾಲಂ ಬರಹಗಳು ಮುಂದೆ ಶುಭಕಾಮನೆ' ಎಂಬ ಹೆಸರಿನಲ್ಲಿ ಸಂಕಲನಗೊಂಡಿವೆ. ಆರೋಗ್ಯಕ್ಕೆ ವ್ಯಾಯಾಮ’ ಅಂಕಣದಲ್ಲಿ ಆರೋಗ್ಯಭಾಗ್ಯಕ್ಕೆ ಅಗತ್ಯವಾದ ವ್ಯಾಯಾಮ -ಆಸನಗಳ ಪರಿಚಯ ಹಾಗೂ ಅದರ ಪ್ರಾಮುಖ್ಯತೆಗಳಿವೆ, ಆಹಾರದಿಂದ ಆರೋಗ್ಯ' ಲೇಖನದಲ್ಲಿ ಊಟಬಲ್ಲವನಿಗೆ ರೋಗವಿಲ್ಲವೆಂಬ ಗಾದೆ’ ಮಾತನ್ನು ಸ್ಪಷ್ಟಪಡಿಸುತ್ತದೆ. ಹೀಗೆ ಇವರ ಬರಹಗಳು ವೈವಿದ್ಯತೆಯೊಂದಿಗೆ ವಸ್ತುನಿಷ್ಟವಾಗಿ, ಸಂಕೀರ್ಣತೆಯೊಂದಿಗೆ ಸ್ಪಷ್ಟವಾಗಿವೆ.
೧೯೭೨ ರಿಂದ ಉದಯವಾಣಿ ದಿನಪತ್ರಿಕೆ ಹಾಗೂ ತುಷಾರ ಮಾಸಪತ್ರಿಕೆಯಲ್ಲಿ ವಿಜಯಾರವರು ಸಂಪಾದಕೀಯ ಹಾಗೂ ಅಂಕಣಗಳನ್ನು ಬರೆಯುತ್ತಿದ್ದರು, `ಮಾತಿನಿಂದ ಲೇಖಣಿಗೆ' ಎನ್ನುವ ಶೀರ್ಷಿಕೆಯಲ್ಲಿ. ಸೃಜನಶೀಲ ಸಾಹಿತ್ಯವನ್ನು ಸರಳ ರೂಪಗೊಳಿಸಿ ಮಾತಾನಾಡುವಂತೆ ಅಂಕಣಗಳಲ್ಲಿ ಬರೆದು, ಲೇಖನ ರೂಪದಲ್ಲಿ ಪ್ರಕಟಿಸಿ, ಸಾಮಾನ್ಯ ಓದುಗರನ್ನು ತಲುಪಿದ್ದು ವಿಶೇಷ.
೭೦ರ ದಶಕಗಳಲ್ಲಿ ಪಾಟೀಲ ಪುಟ್ಟಪ್ಪನವರ ಕನ್ನಡ ಪತ್ರಿಕೆಗಳಲ್ಲಿನ ಬರಹಗಳು ಅಂಕಣಗಳಿಗೆ ಒಂದು ತಿರುವನ್ನು ತಂದು ಕೊಟ್ಟವು. ‘ಪಾಪು ಪ್ರಪಂಚ’ ದ ಅಂಕಣಗಳು ಸಾಹಿತ್ಯ ಸಿಂಚನದೊಂದಿಗೆ ಒಂದು ವಿಭಿನ್ನ ಚಿಂತನಾ ಬರಹಗಳಾಗಿ ಮೂಡಿಬಂದಿವೆ. ಪಾಟೀಲ ಪುಟ್ಟಪ್ಪನವರು ಪತ್ರಿಕಾ ಸಾಹಿತಿಯಾಗಿ ಪ್ರಸಿದ್ದರು. ಅವರ ಅಂಕಣ ಬರಹಗಳು ತರಂಗ ವಾರಪತ್ರಿಕೆಗಾಗಲಿ ಅಥವಾ ಸ್ವಂತ ಪತ್ರಿಕೆಗೆ ಆಗಲಿ ಬರೆಯುತ್ತಿದ್ದ ಲೇಖನಗಳು ಸಾಹಿತ್ಯದ ಒಂದು ಪುಟ್ಟ ಪ್ರಪಂಚವನ್ನೇ ಓದುಗರ ಮುಂದೆ ತೆರೆದಿಡುತ್ತವೆ. ಒಂದೇ ಪುಸ್ತಕವಾಗಿ ಪ್ರಕಟವಾದ ನಾಲ್ಕು ಸಂಪುಟಗಳ ‘ಪಾಪು ಪ್ರಪಂಚ’ದಲ್ಲಿ ಚರಿತ್ರೆಯಿದೆ, ವರ್ತಮಾನವಿದೆ; ವ್ಯಕ್ತಿ ಚಿತ್ರಗಳಿವೆ. ಹಳೆಯ ನೆನಪುಗಳಿವೆ. ಅರಸು ಮನೆತನಗಳ ಕಥೆಯಿದೆ; ಸ್ವಾತಂತ್ರ್ಯ ಹೋರಾಟದ ಗಾಥೆಯಿದೆ.
ಸಾಂಸ್ಕೃತಿಕ-ಐತಿಹಾಸಿಕ ವೈವಿಧ್ಯತೆಗಳನ್ನು ವಿಭಿನ್ನ ವಿಚಾರಧಾರೆಗಳನ್ನು ಅಂಕಣಗಳಲ್ಲಿ ಪರಿಚಯಿಸಿದ ಜ್ಯೋತ್ಸ್ನಾ ಕಾಮತ್ ಸಾಹಿತ್ಯದಲ್ಲಿನ ವೈವಿಧ್ಯತೆಯನ್ನು ಅಂಕಣ ಬರಹಗಳ ರೂಪದಲ್ಲಿ ಹೊರತಂದಿದ್ದಾರೆ. `ನೆನಪಿನಲ್ಲಿ ನಿಂತವರು’ ಸಂಕಲದಲ್ಲಿ ಸಾಹಿತ್ಯ ಸಾಮ್ರಾಜ್ಞರ ಜೀವನ ಚಿತ್ರಣಗಳನ್ನು ಚಿತ್ರಿಸಿದ್ದಾರೆ.
ವಾರಪತ್ರಿಕೆಯ ಸಂಪಾದಕರಾದ ಬಿ, ವಿ, ವೈಕುಂಟರಾಜುರವರ `ಸಂಪಾದಕರ ಡೈರಿ’ ಒಂದು ಬೃಹತ್ ಸಂಪುಟ. “ಸಂಪಾದಕರ ಡೈರಿ ಆಯಾಕಾಲದ ಇತಿಹಾಸವನ್ನು ದಾಖಲೆ ಮಾಡುವಲ್ಲಿ ಸಫಲವಾಗಿದೆ. ಈ ದೃಷ್ಟಿಯಿಂದ ೧೯೮೭, ೧೯೮೮ ಮತ್ತು ೧೯೮೯ರ ರಾಜಕೀಯ, ಆರ್ಥಿಕ, ಸಾಮಾಜಿಕ ವಿಷಯಗಳ ದಾಖಲೆ ಈ ಕೃತಿ ” ಎಂದು ಸಂಪುಟದ ಪ್ರಕಾಶಕರು ಅಭಿಪ್ರಾಯಪಟ್ಟಿದ್ದಾರೆ. (ದಶಕದ ಕನ್ನಡ ಸಾಹಿತ್ಯ, ಪು-೫.) ಸಂಪಾದಕರ ಡೈರಿ ಆಯಾ ಕಾಲದ ಇತಿಹಾಸದೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗೂ ಪ್ರತಿ ಸ್ಪಂದಿಸಿದೆ. ಹಂಪೆಯ ಲಕ್ಷಿನರಸಿಂಹ ವಿಗ್ರಹದ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಶಿವರಾಮ ಕಾರಂತರಿಗೆ ಬರೆದ ಬಹಿರಂಗ ಪತ್ರಗಳಾಗಿರಬಹುದು, ಉನ್ನತ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳ ತೀರ್ಪುಗಳ ಬಗೆಗೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳ ಲೇಖನಗಳಾಗಿರಬಹುದು ಇವರ ಅಂಕಣಗಳ ದಿಟ್ಟ ಬರವಣಿಗೆಗಳಿಗೆ ಸಾಕ್ಷಿಯಾಗಿವೆ.
೧೯೮೪ ರಿಂದ ೯೦ರವರೆಗೆ ಪ್ರಜಾವಾಣಿ ದೈನಿಕದ ಸಾಪ್ತಾಹಿಕ ಪುರವಣಿಯಲ್ಲಿ ಡಾ. ಹಾ. ಮಾ. ನಾಯಕರು ಹಾ.ಮಾ.ನಾಯಕ ಬರೆಯುತ್ತಾರೆ’ ಶೀರ್ಷಿಕೆಯಲ್ಲಿ ಬರೆದರು. ಅವರ ಅಂಕಣಗಳಲ್ಲಿ ಭಾವಗಳ ಅಭಿವ್ಯಕ್ತಿ, ಭಾಷೆಯಲ್ಲಿ ಗಟ್ಟಿತನ ಓದುಗರನ್ನು ಸೆಳೆಯುತ್ತಿದ್ದವು. ಅಲ್ಲದೆ ಬರಹದಶೈಲಿ, ಚಿಂತನಶೀಲತೆ ಮತ್ತು ಆಪ್ತ ವಾಕ್ಯಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಆದ್ಯ ಸ್ಥಾನಗಳಿಸಿಕೊಂಡವು. ಇವರ ಸಂಪ್ರತಿ, ಸಂಕೀರ್ಣ, ಸಮೀಕ್ಷೆ, ಸಂಚಯ ಅಂಕಣ ಬರಹಗಳು ಸಂಕಲನಗೊಂಡು ಪುಸ್ತಕಗಳಾಗಿ ಹೊರಬಂದವು. ಸಂಪ್ರತಿ’ ಸಂಕಲನಕ್ಕೆ ಸಾಹಿತ್ಯ `ಅಕಾಡೆಮಿ ಪ್ರಶಸ್ತಿ’ಯು ಲಭಿಸಿ ದಾಖಲೆ ನಿರ್ಮಿಸಿವೆ.
೮೦-೯೦ರ ದಶಕಗಳು ಅಂಕಣ ಬರಹಗಳ ಸಂಕಲನಗಳ ಮಟ್ಟಿಗೆ ಸುಗ್ಗಿಯ ಕಾಲವೆಂದೇ ಹೇಳಬಹುದು. ಹಾ. ಮಾ. ನಾಯಕರ ಸಂಪ್ರತಿಯ ೨ ಮತ್ತು ೩ನೆಯ ಸಂಪುಟಗಳು ಸಹ ಪ್ರಕಾಶನಗೊಂಡವು. ೧೯೮೪ ರಿಂದ ೯೦ರವರೆಗೆ ಪ್ರಜಾವಾಣಿ ದೈನಿಕದ ಸಾಪ್ತಾಹಿಕ ಪುರವಣಿಯಲ್ಲಿ ಅವರು ಬರೆದ ಒಟ್ಟು ೧೮೪ ವೈವಿದ್ಯಮಯ ಲೇಖನಗಳು ಈ ಎರಡು ಸಂಪುಟಗಳಲ್ಲಿ ಸಂಕಲನಗೊಂಡಿವೆ. ಅಂಕಣ ಬರಹಗಳಿಗೆ ಸಾಹಿತಿಕ ಮೌಲ್ಯವಿದೆಯೆಂಬುದನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ತೋರಿಸಿಕೊಟ್ಟವರು ಡಾ.ಹಾ.ಮಾ.ನಾಯಕರು. ಈ ಪ್ರಗತಿ ಅಂಕಣ ಸಾಹಿತ್ಯಕ್ಕೆ ಸಂದ ಗೌರವವೆನಿಸುತ್ತದೆ.
ಜಾನಪದ ತಜ್ಞರಾದ ಹಾಗೂ ತುಳು ಜಾನಪದದ ಕುರಿತು ವಿಶೇಷ ಪರಿಜ್ಞಾನವುಳ್ಳ ಡಾ.ಬಿ.ವಿ. ವಿವೇಕ ರೈಯವರು ಅಂಕಣ ಬರಹಗಳ ಸಾಹಿತ್ಯಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವವರು. ಇವರ ಬರಹಗಳಲ್ಲಿ ಸಾಹಿತ್ಯದ ಛಾಪು ತಾನೇತಾನಾಗಿ ಕಾಣಿಸಿಕೊಳ್ಳುತ್ತದೆ. ಸಾಹಿತ್ಯದ ವೈವಿದ್ಯತೆಗಳನ್ನೊಳಗೊಂಡಿರುವ ಪ್ರಸ್ಥಾಪಿಸಬೇಕಾಗಿರುವ ಮತ್ತೊಂದು ಪ್ರಮುಖ ಕೃತಿ ಗಿಳಿಸೂವೆ’. ಇದರಲ್ಲಿ ಚಿಂತನಾಪರ ಬರಹಗಾರರಾದ ವಿವೇಕ ರೈ ರವರು ೧೯೯೨ ರಿಂದ ಮುಂಗಾರು ಪತ್ರಿಕೆಗೆ ಬರೆದ ಅಂಕಣ ಬರಹಗಳಲ್ಲಿ ಆಯ್ದ ೫೪ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ. ತುಳು ಜಾನಪದದ ಬಗೆಗೆ ವಿಶೇಷ ಪರಿಜ್ಞಾನವುಳ್ಳ ಇವರ ಬರಹಗಳಲ್ಲಿ ಅದರ ಛಾಪು ಕಾಣಿಸಿಕೊಳ್ಳುತ್ತದೆ. ಗಿಳಿಸೂವೆ’ ಎನ್ನುವ ಅರ್ಥಪೂರ್ಣ ಶೀರ್ಷಿಕೆ ಇದಕ್ಕೆ ಉದಾಹರಣೆಯಾಗಿದೆ. ಮನೆಗೋಡೆಗಳಿಗೆ ಅಳವಡಿಸಿದ ಗಿಳಿಯೊಂದು ಹಾದುಹೋಗಬಹುದಾದಷ್ಟು ವ್ಯಾಪ್ತಿಯ ರಂದ್ರರೂಪದ ಚಿಕ್ಕ ಕಿಂಡಿಗೆ ಗಿಳಿಸೂವೆ ಎಂದು ತುಳು ಸಂದರ್ಭದಲ್ಲಿ ಬಳಸಲಾಗಿದೆ.
ಇದಕ್ಕೆ ಸಮಾನವಾಗಿ ಮನೆಯೊಳಗಿದ್ದುಕೊಂಡೆ ಈ ಸಣ್ಣ ರಂದ್ರದ ಮೂಲಕ ಹೊರಗಿನ ವಿಶಾಲವಾದ ಪ್ರಪಂಚವನ್ನು ನೋಡಬಹುದಾಗಿದೆ. ಅದರಂತೆ ಸೀಮಿತ ಓದಿನಲ್ಲು ಅರಿವಿನ ಪ್ರಪಂಚದ ಮೂಲಕ ಸುತ್ತಣ ಪ್ರಪಂಚವನ್ನು ನೋಡಲು ಪ್ರಯತ್ನಿಸಬಹುದೆಂಬ ವಿಶಾಲ ದೃಷ್ಟಿಕೋನ ವ್ಯಕ್ತವಾಗಿರುವುದನ್ನ ಗಮನಿಸಬಹುದು. ಅಂಕಣ ಬರಹಗಳ ಸಂಗ್ರಹದ ಈ ಕೃತಿ. ಸಂಶೋಧನೆ, ಸಾಹಿತ್ಯ ವಿಮರ್ಶೆ, ಸ್ತ್ರೀವಾದ, ವಿದೇಶ ಪ್ರವಾಸ ಈ ಎಲ್ಲಾ ವಸ್ತು ವಿಷಯಗಳಿಗೆ ಸಂಬಂಧ ಪಟ್ಟ ಚಿಂತನಾಪೂರ್ಣ ಬರಹಗಳನ್ನೊಳಗೊಂಡು ವಿಶಿಷ್ಟವಾಗಿದೆ ಎಂದು ಹೇಳಬಹುದು.
ಸಾಹಿತ್ಯದಲ್ಲಿ ಅದರಲ್ಲೂ ಪತ್ರಿಕಾ ಸಾಹಿತ್ಯಕ್ಕೆ ಒಂದು ವಿನೂತನ ನುಡಿಗಟ್ಟನ್ನೇ ರೂಪಿಸಿದ ಕಾಲ ಲಂಕೇಶ್‌ರವರ ಬರವಣಿಗೆಗಳದ್ದು, ವರದಿ, ವಿಮರ್ಶೆ. ಟೀಕೆ, ಟಿಪ್ಪಣಿ, ಕಥೆ, ಕವಿತೆ ಲೇಖನಗಳ ಮೂಲಕ ಒಂದು ಕ್ರಾಂತಿಯನ್ನೇ ಉಂಟು ಮಾಡಿತೆನ್ನಬಹುದು, ಭಾಷೆಯ ಬಗೆಗೆ ಹೇಳುವುದಾದರೆ ಪತ್ರಿಕಾ ಸಾಹಿತ್ಯಕ್ಕೆ ಒಂದು ವಿನೂತನ ನುಡಿಗಟ್ಟನೇ ಅದು ರೂಪಿಸಿತೆನ್ನಬಹುದು. ಅದಕ್ಕೆ ಪೂರಕವೆನ್ನುವಂತೆ ಅಂಕಣ ಬರಹಗಳಲ್ಲೂ ವೈವಿಧ್ಯತೆ, ಹೊಸತನಗಳು ಕಾಣಿಸಿಕೊಳ್ಳತೊಡಗಿದವು. ಲಂಕೇಶ್‌ರವರ ಬರವಣಿಗೆಗಳಲ್ಲಿನ ಟೀಕೆ, ಟಿಪ್ಪಣಿ, ಭಾಷೆ, ವಿಷಯ ನಿರ್ವಹಣೆ, ನಿರೂಪಣೆ, ಸಂವಹನ ವಿಧಾನಗಳಿಂದ ಓದುಗರಿಗೆ ಹೆಚ್ಚು ಪ್ರಿಯವಾದವು. ಆಪ್ತವಾದವು. ಇತರ ಬರಹಗಾರರು ಸಾಮಾನ್ಯವಾಗಿ ಎತ್ತಿಕೊಳ್ಳುವಂತಹ ಎಲ್ಲಾ ಬಗೆಯ ವಸ್ತು ವಿಷಯಗಳನ್ನು ಹೆಚ್ಚು ಕಡಿಮೆ ಲಂಕೇಶರೂ ತಮ್ಮ ಬರಹಗಳಿಗೆ ಬಳಸಿಕೊಂಡಿದ್ದಾರೆ. ಆದರೆ ಬರವಣಿಗೆಗಳಲ್ಲಿ ಅವುಗಳನ್ನು ನಿರ್ವಹಿಸಿರುವ ರೀತಿ ಮಾತ್ರ ವಿಭಿನ್ನವಾದುದು.
ಕೆಲವು ವಿಶಿಷ್ಟ ವಿನೂತನ ವಿಷಯಗಳ ಬಗೆಗೂ ಲಂಕೇಶರು ಬರೆಯುತ್ತಾರೆ. ಉದಾಹರಣೆಗೆ ಮನ್ಮಥನ ಆಗಮನ ಮುಂತಾದ ಲೇಖನಗಳಲ್ಲಿ ಹದಿಹರೆಯದವರನ್ನು ಕುರಿತು ಅವರ ಬರವಣಿಗೆಗಳನ್ನು ಗಮನಿಸಬಹುದು. ವೈಜ್ಞಾನಿಕ ವಿಷಯಗಳನ್ನು ಓದುಗರಿಗೆ ಅಪ್ಯಾಯಮಾನವಾಗುವಂತೆ ಹೇಗೆ ಬರೆಯಬಹುದೆಂಬುದಕ್ಕೆ ಈ ಬರವಣಿಗೆಗಳೆ ಸಾಕ್ಷಿಯಾಗುತ್ತವೆ. ಕಥೆ, ಲಲಿತ ಪ್ರಬಂಧ, ವಿಮರ್ಶೆ, ಚಿಂತನೆ ಇವೆಲ್ಲಾ ಗುಣಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ವ್ಯಕ್ತಿ ಚಿತ್ರಗಳನ್ನು ಬರೆಯುವಾಗ ಎಷ್ಟೇ ಆತ್ಮೀಯರೆನಿಸಿದ ವ್ಯಕ್ತಿಗಳಾಗಿರಲಿ ಅವರ ಗುಣ-ದೋಷಗಳೆರೆಡನ್ನು ತೆರೆದಿಡುವುದು ಲಂಕೇಶರ ಪ್ರವೃತ್ತಿ. ಅವರು ಏನೇ ಬರೆದರೂ ಅಲ್ಲಿ ಮಹತ್ವದ ಚಿಂತನೆ ಇರುತ್ತದೆ: ಓದುಗರನ್ನು ಅದು ಚಿಂತನೆಗೆ ಹಚ್ಚುತ್ತದೆ. ಟೀಕೆ, ಟಿಪ್ಪಣಿಗಳ ಮೂಲಕ ಉತ್ತಮ ಗದ್ಯದ ಮಾದರಿಯೊಂದನ್ನು ಅವರು ಕನ್ನಡಿಗರಿಗೆ ಒದಗಿಸಿಕೊಟ್ಟಿದ್ದಾರೆ.
ಅಂಕಣ ಬರಹಗಳಿಗೆ ಸಂಬಂಧಿಸಿದಂತೆ ರೂಢಿಯಲ್ಲಿದ್ದ ನುಡಿಗಟ್ಟನ್ನು ಬದಲಿಸಿ ಬರೆದರು ‘ಟೀಕೆ ಟಿಪ್ಪಣಿ’ ಸಂಪುಟದ ಎರಡನೆಯ ಆವೃತ್ತಿ ಹೊರಬಂದಾಗ ಅದರಲ್ಲಿ ಲಂಕೇಶರವರು ಹಿಂದೆ ಪ್ರಜಾವಾಣಿಗೆ ಬರೆಯುತ್ತಿದ್ದ ಕೆಲವು ಅಂಕಣ ಬರಹಗಳು ಸೇರ್ಪಡೆಯಾದವು. ಲಂಕೇಶರವರ ಹೆಸರಿಸಬೇಕಾದ ಮತ್ತೊಂದು ಅಂಕಣ ಬರಹಗಳ ಸಂಕಲನವೆಂದರೆ ನಿಮ್ಮಿ ಕಾಲಂ’. ಲಂಕೇಶ ಪತ್ರಿಕೆಯಲ್ಲಿ ನಿಮ್ಮಿ’ ಎಂಬ ಕಾಲ್ಪನಿಕ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಅಲ್ಲಿನ ಬರಹಗಳಲ್ಲಿ ಹಲವು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಪತ್ರಗಳೋಪಾದಿಯಲ್ಲಿ ಪ್ರಕಟವಾಗಿರುವ ಇಲ್ಲಿನ ಬರಹಗಳು ಲೇಖಕಿಯ ಅನುಭವ, ಭಾವನೆ, ಚಿಂತನೆಗಳನ್ನು ಓದುಗರ ಮುಂದೆ ತೆರೆದಿಡುತ್ತವೆ. ಸಾಹಿತ್ಯ ವಿಮರ್ಶೆ, ಸಮಾಜ ವಿಮರ್ಶೆ, ಆತ್ಮ ವಿಮರ್ಶೆ, ಸ್ತ್ರೀವಾದ ಇವೆಲ್ಲಾ ಇರುವ ನಿಮ್ಮಿಕಾಲಂ’ನ ಬರಹಗಳು ಉತ್ತಮ ಭಾವಾಭಿವ್ಯಕ್ತಿಗಳಾಗಿ ಗಮನಸೆಳೆಯುತ್ತವೆ. ಲಂಕೇಶ್ ಪತ್ರಿಕೆಯಲ್ಲಿ ಗಮನಸೆಳೆದ ಮಲ್ಲಿನಾಥನ ಧ್ಯಾನ’ ಅಂಕಣ ಸೃಜನಶೀಲ ಬರಹಗಾರ್ತಿ ವೈದೇಹಿಯವರ ವಿಭಿನ್ನ ಅನುಭವಗಳನ್ನೊಳಗೊಂಡ ಸಾಂಸ್ಕೃತಿಕ ಪಠ್ಯದಂತಿದೆ. ಆಧುನಿಕ ಸಾಹಿತ್ಯದಲ್ಲಿ ಮಹಿಳಾ ಬರವಣಿಗೆಗಳ ಕುರಿತ ವೈದೇಹಿಯವರ ಮಾದರಿಗಳು ಈ ಅಂಕಣಗಳಲ್ಲಿ ಅನಾವರಣಗೊಂಡಿವೆ. ಇವರ ಲೇಖನಗಳಲ್ಲಿ ಸ್ತ್ರೀ ಸಂವೇದನೆಯೊಂದಿಗೆ ಕಥೆ, ವಿಮರ್ಶೆ, ವ್ಯಕ್ತಿ ಪರಿಚಯ, ನೆನಪು ಭಾವಲೋಕದ ಹರಿವಿಗೆ ಸಿಕ್ಕಿದ್ದನ್ನೆಲ್ಲಾ ಒಳಗೊಂಡಿರುವಂತಹದ್ದು ಕಂಡುಬರುತ್ತದೆ.
ಸಾಂಸ್ಕೃತಿಕ ವಿದ್ಯಮಾನಗಳನ್ನು ಭಾವ ತೀವ್ರತೆಯಲ್ಲಿ ಬರೆಯುವ ಹಾಗೆಯೇ ತಿಳಿಹಾಸ್ಯದ ಧಾಟಿಯಲ್ಲಿಯೂ ಆತ್ಮೀಯವಾಗಿ ಚಿತ್ರಿಸುವುದು, ಆಂತರಿಕ ಸತ್ಯವನ್ನು ಕ್ಷಣಿಕ ಎನ್ನಿಸುವ ನಿತ್ಯದ ಸೌಂದರ್ಯವನ್ನು ಬರಹಗಳಲ್ಲಿ ಒಟ್ಟಿಗೆ ಪರಿಭಾವಿಸುವಂತೆ ಓದುಗರನ್ನು ವೈದೇಹಿಯವರ ಬರಹಗಳು ಪ್ರೇರೇಪಿಸುತ್ತವೆ. ವಿಚಾರವೊಂದರ ಎಲ್ಲಾ ಮಗ್ಗುಲುಗಳನ್ನು ತಲಸ್ಪರ್ಶಿಯಾಗಿ ಪರಿಶೀಲಿಸುವ ಈ ಲೇಖಕಿಯ ಬರಹಗಳು ವಿಚಾರವಂತಿಕೆಯಿಂದ ಒಂದಕ್ಕೊಂದು ಪೋಣಿಸುವ ಮೂಲಕ ಒಳ ಸಂಬಂಧಗಳನ್ನು ಧ್ವನಿಸುವ ಪ್ರತಿಭೆಯಿಂದ, ಸಂಕ್ಷಿಪ್ತತೆಯಿಂದ ಚಿತ್ತಾಕರ್ಷಣೆಯನ್ನುಂಟು ಮಾಡುವುದು ಈ ಬರಹಗಳ ವೈಶಿಷ್ಟ್ಯ.
ಲಂಕೇಶರವರ ಗರಡಿಯಲ್ಲಿಯೇ ಪಳಗಿದ ಮತ್ತೊಬ್ಬ ಬರಹಗಾರರಾದ ರವಿಬೆಳಗೆರೆ ಅವರು ಸ್ವತಂತ್ರವಾಗಿ ಬೆಳೆದವರು. ಅವರ ಅಂಕಣ ಬರಹ ಹಾಗೂ ಸಂಪಾದಕೀಯ ಬರಹಗಳ ಮಟ್ಟಿಗೆ ಇವರು ಸರ್ವ ಸ್ವತಂತ್ರರು. ತಮ್ಮ ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ಓದುಗರೊಂದಿಗೆ ರವಿಯವರು ಹಂಚಿಕೊಂಡ ಖಾಸಾಬಾತ್’ (ಸ್ವಂತದ ಮಾತುಗಳು)ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಶೀರ್ಷಿಕೆಯೇ ಸೂಚಿಸುವಂತೆ ಇಲ್ಲಿನ ಬರಹಗಳೆಲ್ಲಾ ಸ್ವಂತದ ಅನುಭವದ ಕಥೆಗಳಂತಿವೆ, ಆತ್ಮ ಕಥೆಗಳಂತಿವೆ. ತಮ್ಮ ನೈಜ ಅನುಭವ ಘಟನೆಗಳೆಂಬಂತೆ ನಿರೂಪಿಸುವ ಅನೇಕ ಪ್ರಸಂಗಗಳು ಅಲ್ಲಿನ ಭಾಷೆ, ಕಥನ ಕ್ರಮಗಳಿಂದ ವಿಭಿನ್ನವಾಗಿವೆ. ಬಾಲ್ಯದ ನೆನಪುಗಳನ್ನು, ಯೌವ್ವನದ ಅನುಭವಗಳನ್ನು ಬದುಕಿನಲ್ಲುಂಟಾದ ಸೋಲು ಗೆಲವುಗಳನ್ನು, ನೋವು ನಲಿವುಗಳನ್ನು ರೋಚಕವಾಗಿ ಅಭಿವ್ಯಕ್ತಿಸಿದ್ದಾರೆ.
ಲಂಕೇಶರವರ ಬರವಣಿಗೆಗಳಿಂದ ಪ್ರೇರಿತವಾಗಿ ಬರೆದವರಲ್ಲಿ ಅಬ್ದುಲ್ ರಶೀದ್‌ರವರು ಮತ್ತೊಬ್ಬ ಪ್ರಮುಖರು. ೧೯೯೪ರವೇಳೆಗೆ ಅವರು ಮುಂಗಾರು ಪತ್ರಿಕೆಯಲ್ಲಿ ಬರೆಯುತ್ತಿದ್ದ `ಮಾತಿಗೂ ಆಚೆ’ ಅಂಕಣ ಬರಹಗಳು ಈಗ ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಇದರಲ್ಲಿ ವ್ಯಕ್ತಿ ಚಿತ್ರಗಳಿವೆ. ಕಥೆ, ಪ್ರಬಂಧ, ಹರಟೆ ಹೀಗೆ ಬಹುತ್ವದ ಬರಹಗಳನ್ನೊಳಗೊಂಡಿರುವುದು ಈ ಕೃತಿಯ ವೈಶಿಷ್ಟ್ಯ. ರಶೀದ್‌ರವರು ತಮ್ಮ ಸಂಪರ್ಕಕಕ್ಕೆ ಬಂದ ವ್ಯಕ್ತಿಗಳ ಕುರಿತು ಆತ್ಮೀಯವಾಗಿ ಬರೆದಿದ್ದಾರೆ. ಕಿ. ರಂ. ರಂತಹ ಸಾಹಿತಿಗಳು, ಲಂಕೇಶರಂತಹ ಬರಹಗಾರರು, ರಾಮಚಂದ್ರ ಭಟ್ಟರಂತಹ ಅನುಭಾವಿಗಳು ಇವರೆಲ್ಲರ ಕಥಗಳನ್ನು ಬರಹಗಳಲ್ಲಿ ತಂದಿದ್ದಾರೆ ಓದುತ್ತಾ ಹೋದಂತೆ ಓದುಗರಿಗೆ ಎಲ್ಲ ಕಥೆಗಳು ವ್ಯಕ್ತಿಗಳು ಆತ್ಮೀಯರಾದಂತೆ ಅನುಭವವಾಗುವುದು ಈ ಲೇಖನಗಳ ವಿಶೇಷ. ಅಂಕಣ ಸಾಹಿತ್ಯದ ಪಾರಂಪರಿಕ ಲಕ್ಷಣಗಳನ್ನು ಮೀರಿದ ಬರಹಗಳಾಗಿ ಮುಖ್ಯವೆನಿಸುತ್ತದೆ.
ಪ್ರಾದೇಶಿಕ ಭಾಷಾ ವೈವಿಧ್ಯತೆಗಳನ್ನಾಧರಿಸಿದ ಆಯಾ ಪ್ರದೇಶಗಳ ಸಾಂಸ್ಕೃತಿಕ-ಸಾಹಿತ್ಯಕ ಕಾರ್ಯಕ್ರಮಗಳ ಬಗೆಗಿನ ರಸಗ್ರಾಹಿ ವಿಶ್ಲೆಷಣೆಗಳಾಗಿ ನಾ. ದಾಮೊದರ ಶಟ್ಟಿಯವರ ತೆಂಕಣ ಸುಳಿಗಾಳಿ’, ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಚಹಾದ ಜೊತೆ ಚೂಡದ್ಹಾಂಗ’ ವೀರಣ್ಣ ದಂಡೆಯವರ `ಕಲಬುರ್ಗಿಯ ಕಲರವ’ ಗಮನ ಸೆಳೆಯುತ್ತವೆ. ಇವು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಕುರಿತಾದ ಪ್ರಾದೇಶಿಕ ಇತಿಮಿತಿಗಳನ್ನು ರಾಜ್ಯವ್ಯಾಪಿಯಾಗಿ ಅಥವಾ ರಾಷ್ಟ್ರ ವ್ಯಾಪಿಯಾಗಿ ವಿಸ್ತರಿಸಬಲ್ಲ ಚಿಂತನೆಗಳು ವಿ.ಗ. ನಾಯಕ ಅವರ ಬರಹಗಳಲ್ಲಿವೆ. ಅವರು ಕರಾವಳಿ ಕರ್ನಾಟಕದ ಅನೇಕ ಸಾಹಿತಿಗಳ ಸಾಹಿತ್ಯದ ಬಗೆಗೆ ಬರೆದಿರುವುದು ಅಲ್ಲಿನ ವಸ್ತುನಿಷ್ಠ ಪರಿಭಾವನೆ ಗಮನ ಸೆಳೆಯುತ್ತದೆ.
ವಸಂತಕುಮಾರ ಪೆರ್ಲ ಅವರು ಸುದ್ದಿ ಬಿಡುಗಡೆಗೆ ಬರೆಯುತ್ತಿದ್ದ `ಪ್ರಸ್ತಾಪ’ ಎಂಬ ಹೆಸರಿನ ೫೨ ಅಂಕಣ ಬರಹಗಳು ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಇದರಲ್ಲಿ ಪ್ರಾದೇಶಿಕ, ಜಾನಪದ ಹಾಗೂ ಸಂಸ್ಕೃತಿಗೆ ಸಂಬಂಧ ಪಟ್ಟ್ ಲೇಖನಗಳ ಜೊತೆಗೆ ಮುಂಬಯಿ, ಲಕ್ಷದ್ವೀಪ ಪ್ರದೇಶಗಳ ಜನಜೀವನ ಸಂಸ್ಕೃತಿಗಳನ್ನು ಬಿಂಬಿಸುವ ಲೇಖನಗಳು ಇಲ್ಲಿವೆ. ಮುಖ್ಯವಾಗಿ ಗಮನ ಸೆಳೆಯುವುದು ಲಲಿತ ಪ್ರಬಂಧಗಳ ಮಾದರಿ, ಇದರಲ್ಲಿ ಪ್ರಾದೇಶಿಕ ಅನುಭವಗಳನ್ನು ಸಾರ್ವತ್ರಿಕ ಗೊಳಿಸುವ ಸಾಹಿತ್ಯಿಕ ಸತ್ಯಗಳಿವೆ.
ಕನ್ನಡಪ್ರಭ ಪತ್ರಿಕೆಯಲ್ಲಿ ನಾರಿಲೋಕ’ ಅಂಕಣದಲ್ಲಿ ಸಾಹಿತ್ಯ ವೈವಿಧ್ಯತೆ ಹಾಗೂ ವಿವಿಧ ವಿಷಯಗಳ ಕುರಿತಂತೆ ಪ್ರತಿಭಾ ಅಂಕಣ ಬರೆದಿದ್ದಾರೆ. ಮಹಿಳಾ ಸಾಹಿತ್ಯ ಸಂಪುಟ ಮಾಲಿಕೆಯಲ್ಲಿ ಇವರ ಅಂಕಣ ಬರಹ' ಅಂಕಣ ಲೇಖನಗಳ ಸಂಪಾದನಾ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಗೊಳಿಸಿದೆ. ಲಂಕೇಶ್ ಪತ್ರಿಕೆ’ಯಲ್ಲಿ ವಾರದ ಅಂಕಣಗಳು ಹಾಗೂ ನಿಮ್ಮಿ ಕಾಲಂ'ಗೆ ಬರೆದು ಆ ಮೂಲಕ ಸ್ತ್ರೀ ಧ್ವನಿಯಾಗಿ ಸ್ಪಂದಿಸಿದ್ದಾರೆ. ಇಲ್ಲಿನ ಎಲ್ಲ ಲೇಖನಗಳು ನಿಮ್ಮಿ ಅಂಕಣ ಬರಹಗಳ ಸಂಗ್ರಹ’ದಲ್ಲಿ ಪ್ರಕಟವಾಗಿವೆ.
ಅಚಲ ಪತ್ರಿಕೆಯಲ್ಲಿ ವಿಜ್ಞಾನ ಲೋಕದಲ್ಲಿ ಮಹಿಳೆ' ಅಂಕಣದಲ್ಲಿ ವಿಜ್ಞಾನ, ಸಾಹಿತ್ಯದಲ್ಲಿ ಸಾಧನೆ ಮಾಡಿದ ಮಹಿಳಾ ಸಾಹಿತ್ಯವನ್ನು ನೇಮಿಚಂದ್ರ ಬರೆದಿದ್ದಾರೆ. ಸಾಹಿತ್ಯ ಮತ್ತು ವಿಜ್ಞಾನ', ಬದುಕು ಮತ್ತು ಮಹಿಳಾ ಲೋಕ’, ಮಹಿಳಾ ಅಧ್ಯಯನ’ದ ಬಗ್ಗೆ ವಿಶೇಷ ಕಾಳಜಿಯಿಂದ ಬರೆದಿರುವ ಇವರು ಕಥಾ ವಸ್ತುವನ್ನು ರೂಪಿಸಿಕೊಳ್ಳುವಾಗಲು ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಿಂದ ಅನುಭವಿಸಿ ಬರೆದಿರುವುದು ವಿಶೇಷತೆ. ಜಾಗತಿಕ ವೈವಿಧ್ಯತೆಗಳ ವೈಜ್ಞಾನಿಕ ವಿವರಣೆಗಳನ್ನೊಳಗೊಂಡ ಪೆರುವಿನ ಪವಿತ್ರ ಕಣಿವೆಯಲ್ಲಿ’ ದಕ್ಷಿಣ ಅಮೇರಿಕಾದ ದೇಶದ ಪೆರುವಿನ ಮಧ್ಯಭಾಗದಲ್ಲಿ ಹಾದು ಹೋಗಿರುವ ಗಡಿಯನ್ನು ರೂಪಿಸುವ ಭೂ ಮಧ್ಯ ರೇಖೆಯ ಕುರಿತು ಪ್ರತ್ಯಕ್ಷ ವೀಕ್ಷಣೆ ನಡೆಸಿ ವಿಶ್ಲೇಷಿಸಿರುವುದು ಗಮನೀಯ. ಇವರ ಅಂಕಣ ಬರಹಗಳಲ್ಲಿರುವ ಸಾಹಿತ್ಯ ಮತ್ತು ಅನ್ಯಜ್ಞಾನ ಶಿಸ್ತುಗಳೊಂದಿಗೆ ಹೊಂದಿರುವ ಅಂತರ್ ಸಂಬಂಧದ ತಾತ್ವಿಕ ಅಂಶಗಳನ್ನು ಲೇಖಕಿ ವಿನಯಾ ಗುರುತಿಸಿದ್ದಾರೆ. ಬದುಕನ್ನು ಸಾಕಾರಾತ್ಮಕ ದೃಷ್ಟಿಕೋನದಿಂದ ನೋಡುವಂತಹದ್ದು ಬದುಕು ಬದಲಿಸಬಹುದು’ ಅಂಕಣದಲ್ಲಿದೆ. ವಾಸ್ತವಿಕತೆಯನ್ನು ಪ್ರೇರೇಪಿಸುವ ಪಾತ್ರಗಳೊಂದಿಗೆ, ಸಹಜತೆಗೆ ಪುಷ್ಟಿನೀಡುವ ಮಾದರಿಗಳನ್ನು ಚಿತ್ರಿಸಿರುವುದು `ನೆನಪಿನಂಗಣದಲ್ಲಿ ನೂರು ಚಿತ್ತಾರ' ಅಂಕಣದಲ್ಲಿದೆ.
ಪ್ರಜಾವಾಣಿ, ನಮ್ಮನಾಡು, ಕನ್ನಡ ಕ್ರಾಂತಿ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿರುವ ಆಶಾದೇವಿಯವರ ಅಂಕಣ ಬರಹಗಳಲ್ಲಿ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಬರೆದ ನಾರೀಕೇಳಾ’ ವಿಶೇಷ ಅಂಕಣ. ಈ ಲೇಖನಗಳು ಸಾಹಿತ್ಯದ ಮುಕ್ತಛಂದದೊಂದಿಗೆ ಲೋಕಮೀಮಾಂಸೆಯನ್ನು ತೆರೆದಿಡುತ್ತವೆ. ಭಾನುವಾರದ ಪುರವಣಿ ಮುಕ್ತ ಛಂದ’ದಲ್ಲಿ ಪ್ರಕಟವಾದ `ನಾರಿಕೇಳಾ’ ಅಂಕಣದಲ್ಲಿ ಸ್ತ್ರೀ ಸಂವೇದನೆಗಳು ಮುಖ್ಯವಸ್ತುವಾಗಿದ್ದು, ಸಾಹಿತ್ಯ, ಸಂಸ್ಕೃತಿಯ ಕುರಿತು ಬೆಳಕು ಚೆಲ್ಲಿದೆ. ಈ ಲೇಖನಗಳು ಇದೇ ಶೀರ್ಷಿಕೆಯನ್ನೊಳಗೊಂಡ ಅಂಕಣ ಬರಹಗಳ ಸಂಕಲನ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ.
ಸಾಹಿತ್ಯ, ಸಮಾಜ, ಸಂಸ್ಕೃತಿಗಳನ್ನು ಸ್ತ್ರೀ ಸಂವೇದನೆಯ ಮೂಲಕ ನೋಡುವುದಕ್ಕೆ ಬೇಕಾದ ದೃಷ್ಟಿಕೋನಗಳು ನಾರೀಕೇಳಾ ಅಂಕಣ ಬರಹಗಳಲ್ಲಿ ಚರ್ಚೆಗೊಂಡಿವೆ. ಇಲ್ಲಿನ ಲೇಖನಗಳು ಸಾಹಿತ್ಯ ವಿಶ್ಲೇಷಣೆಯ ಮೂಲಕ ಆರಂಭವಾಗಿ ಸಮಾಜ, ರಾಜಕಾರಣ, ಸಂಸ್ಕೃತಿಯ ಚರ್ಚೆಗೆ ತಿರುವು ಕಂಡಿವೆ. ವಿಮರ್ಶೆಯ ನೆಲೆಯಿಂದ ರೂಪುಗೊಂಡು ಸಾಹಿತ್ಯ, ಸಾಮಾಜಿಕ ಚಿಂತನೆಯಾಗಿ ಮತ್ತು ತಾತ್ವಿಕ ಜಿಜ್ಞಾಸೆಯಾಗಿ ರೂಪಾಂತರ ಗೊಂಡಿವೆ. ಆಶಾದೇವಿಯವರೇ ಹೇಳಿರುವಂತೆ “ಈ ಅಂಕಣವನ್ನು ಆರಂಭಿಸಿದ್ದೇ ಸಾಹಿತ್ಯ ಪಠ್ಯಗಳ ಮರು ಓದಿನ ಚೌಕಟ್ಟನಲ್ಲಿ, ಮುಂದುವರಿದಂತೆ ಅಲ್ಲಲ್ಲಿ ಚೌಕಟ್ಟನ್ನು ಮೀರಿದ್ದು ದಾಟಿದ್ದು ಹೌದು, ಇದು ಮರು ಓದಿನ ಮತ್ತು ಹೆಣ್ಣಿನ ಶಕ್ತಿಯನ್ನು ಹೆಚ್ಚಿಸಿತೆನ್ನಬಹುದು.” ಹಾಗಾಗಿಯೇ ಈ ಅಂಕಣ ಬರಹಗಳಲ್ಲಿ ಸಾಹಿತ್ಯ ಕೃತಿಗಳ, ವಿಮರ್ಶೆ, ವಿಶ್ಲೇಷಣೆಗಳೊಂದಿಗೆ ಚಿಂತನೆ, ಮರುಮೌಲ್ಯಗಳು ಮೇಳೈಸಿವೆ ಎಂದೇ ಹೇಳಬಹುದು. (ಪ್ರಜಾವಾಣಿ, ೨೦-೦೭-೨೦೧೪)
ಕುವೆಂಪು, ಬೇಂದ್ರೆ, ಕಾರಂತರಂತಹ ಹಿರಿಯ ಲೇಖಕರ ಕೃತಿಗಳಲ್ಲಿರುವ ಹೆಣ್ಣಿನ ಕುರಿತಾದ ಮೌಲಿಕ ವಿಷಯಗಳನ್ನು ಇವರ ಅಂಕಣಗಳಲ್ಲಿ ಮರು ಓದಿನ ಮೂಲಕ ಗುರುತಿಸಿದ್ದಾರೆ. ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿ’ಯ ಸುಬ್ಬಮ್ಮ ಇವರ ಸುಬ್ಬಮ್ಮ ಸೋಲುವುದಿಲ್ಲ' ಅಂಕಣದಲ್ಲಿ ಸುಬ್ಬಮ್ಮ ಪ್ರತಿರೋಧದ ಮಾದರಿ ಯಾಗಿದ್ದಾಳೆ. ದುರಂತ ನಾಯಕಿಯಾಗುವ ಬದಲು, ಸುಬ್ಬಮ್ಮ ವ್ಯವಸ್ಥೆಯ ದುರಂತದ ಅರಿವು ಮೂಡಿಸುತ್ತಾಳೆ. ಸೋತಿರುವುದವಳಲ್ಲ, ವ್ಯವಸ್ಥೆ. ಎನ್ನುವ ತಿಳುವಳಿಕೆ ಮೂಡಿಸುವ ಪಾತ್ರವಾಗಿ ಈ ಅಂಕಣದಲ್ಲಿ ಸುಬ್ಬಮ್ಮನನ್ನು ಗುರುತಿಸಿರುವುದು ವಿಶೇಷ. `ನಾನು ಫಣಿಯಮ್ಮ' ಅಂಕಣದಲ್ಲಿ ಸಾಮಾಜಿಕ ಕಟ್ಟುಕಟ್ಟಳೆ ಚೌಕಟ್ಟುಗಳನ್ನು ಮೀರಿದ ಫಣಿಯಮ್ಮ ಕಾದಂಬರಿಯ ದಾಕ್ಷಾಯಿಣಿಯ ಪಾತ್ರದಲ್ಲಿ ಬದಲಾದ ಕಾಲಘಟ್ಟದಲ್ಲಿ ಹೊಸಚೌಕಟ್ಟನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಇನ್ನೊಂದು ಚೌಕಟ್ಟನ್ನು ಮೀರುವುದು ಅನಿವಾರ್ಯ ಎಂಬುದನ್ನು ತಾತ್ವಿಕ ನೆಲೆಯಿಂದ ಚರ್ಚೆಗೊಳಪಡಿಸಿದ್ದಾರೆ. (ಪ್ರಜಾವಾಣಿ, ೧೬-೦೨-೨೦೧೪)
ದ.ರಾ. ಬೇಂದ್ರೆಯವರ ಸಖೀಗೀತದ ಕುರಿತು ಬರೆದ ಅಂಕಣದಲ್ಲಿ 'ಮನದನ್ನೆ’ ಕವಿತೆಯ ಒಂದು ಭಾಗವನ್ನು ಚರ್ಚಿಸಿ, ಶೀರ್ಷಿಕೆ ಮನದನ್ನೆಯಾದರೂ (ಸತಿ) ಆಕೆಗೆ ಆಜ್ಞೆ ಮಾಡುವ ಶೈಲಿಯಲ್ಲಿ ಸಮಾಜದ ರೀತಿ ರಿವಾಜುಗಳ, ಕುಟುಂಬದ ಹೊಂದಾಣಿಕೆಯ ಸಂದೇಶವನ್ನು ಕವಿತೆಯ ಪದಗಳಲ್ಲಿ ತಲುಪಿಸಿರುವುದನ್ನು ಗುರುತಿಸಿ, ೫೦ರ ದಶಕದಲ್ಲಿದ್ದ ಮಹಿಳೆಯ ಸ್ಥಿತಿಯನ್ನು ಕುರಿತು ಈ ಚಿತ್ರ ಹೇಳುತ್ತದೆ. ಎಂದು ಆಶಾದೇವಿ ಯವರು ಈ ಅಂಕಣದಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಇವರ ಡಿ.ಆರ್. ನಾಗರಾಜ್ ಬೆಲೆಬಾಳುವ ಬರಹಗಳು’, ಗೌರಿ ಲಂಕೇಶ್ ಕಂಡಹಾಗೇ’ ಈ ಲೇಖನ ಸಂಕಲನಗಳು ಸಾಹಿತ್ಯದ ದೃಷ್ಟಿಯಿಂದಲೂ, ವಿಶ್ಲೇಷಣೆ, ವಿಮರ್ಶಾ ದೃಷ್ಟಿಕೋನದಿಂದಲೂ ಮುಖ್ಯವಾದವು.
ಆಶಾದೇವಿಯವರ ಮೈಮನಗಳ ಸುಳಿಯಲ್ಲಿ’ ಈ ಲೇಖನದಲ್ಲಿ ಕಾರಂತರ ಕೃತಿಯಲ್ಲಿ ಮೂಡಿರುವ ಹೆಣ್ಣಿನ ಚಿತ್ರಣದ ವಾಸ್ತವತೆ ಮತ್ತು ಕಾವ್ಯ, ಗ್ರಂಥಗಳಲ್ಲಿ ಹೆಣ್ಣನ್ನು ಕಾಣುವ, ನಡೆಸಿಕೊಂಡಿರುವ ಸತ್ಯಗಳನ್ನು ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಕಾರಂತರ ವ್ಯಕ್ತಿತ್ವ ಹಾಗೂ ಅವರು ಕಾದಂಬರಿಗಳಲ್ಲಿ ಹೆಣ್ಣಿನ ಘನತೆಯ ಬಗ್ಗೆ ಅಭಿವ್ಯಕ್ತಿಸುವ ಪರಿಯನ್ನು ಕಾರಂತರ ಕೃತಿಗಳಲ್ಲಿ ಹೆಣ್ಣಿನ ಪಾತ್ರಗಳು ಕೆಲವೊಮ್ಮೆ ಸ್ಪಷ್ಟವಾಗಿ, ಕೆಲವೊಮ್ಮೆ ಆತ್ಮಜ್ಞಾನದ ಅಮೂರ್ತತೆಯಲ್ಲಿ ಕೊಡುವುದೇನು, ಪಡೆಯುವುದೇನು?’ ಎಂದು ಗುರುತಿಸುವ ಪ್ರಯತ್ನಗಳಿವೆ. ಈ ಅಂಕಣದಲ್ಲಿ ಹೆಣ್ಣನ್ನು ಹೊಸ ದೃಷ್ಟಿಕೋನದಿಂದ ನೋಡುವ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಂಬಿಲಾಗಿದೆ. ನರ್ಮದೇ ತಾಯಿಸಾಹೇಬಳಾಗುವ ಪರ್ವ' ಲೇಖನದಲ್ಲಿ ರಂ. ಶಾ. ಲೋಕಾಪುರ ಅವರ ತಾಯಿಸಾಹೇಬದ ನರ್ಮದಾಳ ಪಾತ್ರದಲ್ಲಿರುವ ಹೆಣ್ಣಿನ ಶಕ್ತಿಯನ್ನು `ತಾಯ್ತನವೇ ಅಹಂಕಾರವನ್ನು ಕಳೆದುಕೊಳ್ಳುವ ನಿತಾಂತವಾಗಿ ತನ್ನ ಆಪ್ತರನ್ನು ಪೊರೆಯುವ ಶಕ್ತಿ ಸಂಚಯದ ಮಾರ್ಗವೇನೋ ಎನ್ನುವ ಸಾಧ್ಯತೆಯನ್ನು ವಿಸ್ತರಿಸುತ್ತಾಳೆ' ಎಂದು ಹಂತ ಹಂತವಾಗಿ ಕಥೆಯ ಚಿತ್ರಣವನ್ನು ವಿಶ್ಲೇಷಿಸಿದ್ದಾರೆ.
ಉದಯವಾಣಿ ಪತ್ರಿಕೆಯಲ್ಲಿ ಸಾಹಿತ್ಯ, ಸಮಾಜ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದಹರಾಕಾಶ', ಇಳೆಯ ಕಣ್ಣು’ ಎಂಬ ಅಂಕಣಗಳನ್ನು ಧರಣೀದೇವಿ ಮಾಲಗತ್ತಿಯವರು (ಹಿರಿಯ ಪೋಲಿಸ್ ಅಧಿಕಾರಿ, ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ) ಬರೆದಿದ್ದಾರೆ ಹಾಗೂ ಇದೇ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿಯೂ ಸಂಕಲಿಸಿದ್ದಾರೆ. ಕರ್ನಾಟಕಮಲ್ಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ರತ್ನಾಕರ ಶೆಟ್ಟಿಯವರ ಅಂಕಣ ಬರಹಗಳು `ಪ್ರಾಸಂಗಿಕ’ದ ಎರಡು ಸಂಪುಟಗಳಾಗಿ ಸೇರ್ಪಡೆಯಾಗಿವೆ. ಹೊರನಾಡ ಪತ್ರಿಕೆಯಾಗಿದ್ದರಿಂದ ಈ ಅಂಕಣ ಬರಹಗಳ ಸಂಕಲನದಲ್ಲಿ ಕೆಲವೊಂದು ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಇಲ್ಲಿನ ಅನೇಕ ಬರಹಗಳು ಮುಂಬಯಿ ಪರಿಸರದ ಮರಾಠಿ ಸಾಹಿತ್ಯ -ಸಂಸ್ಕೃತಿಗೆ ಸಂಬಂಧಪಟ್ಟ ಅಪೂರ್ವ ಮಾಹಿತಿಗಳನ್ನೊದಗಿಸಿ ಕೊಡುತ್ತವೆ. ಜೊತೆಗೆ ಮುಂಬಯಿ ಕನ್ನಡ ಚಟುವಟಿಕೆಗಳ ಬಗೆಗೂ, ಕರ್ನಾಟಕದ ಧೀಮಂತರ ಕುರಿತು ಕೆಲವು ಲೇಖನಗಳು ವಿವರಗಳನ್ನು ನೀಡುತ್ತವೆ. ಒಳನಾಡು, ತುಳು ನಾಡು, ಇತರ ರಾಜ್ಯಗಳ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗೆಗೂ ಇವರು ಪ್ರತಿಕ್ರಿಯಿಸಿ ಬರೆದಿದ್ದಾರೆ. ಸಾಹಿತ್ಯಾಸಕ್ತರಿಗೆ ಇವು ಅಪೂರ್ವ ಮಾಹಿತಿಗಳನ್ನೊದಗಿಸುತ್ತಿವೆ.
ಸಾಹಿತ್ಯದ ಇತರ ಪ್ರಕಾರಗಳೊಂದಿಗೆ ತುಲನೆ ಮಾಡಿದಾಗ ಅಂಕಣ ಬರಹಗಳಲ್ಲಿ ವಸ್ತುವಿಷಯ ಮತ್ತು ಅಭಿವ್ಯಕ್ತಿಯಲ್ಲಿ ಗಾಂಭೀರ್ಯ ಮತ್ತು ಕಠಿಣ ವಿನ್ಯಾಸಗಳಿಗೆ ಬದಲಾಗಿ ಸರಳ ಹಾಗು ಸುಲಭವಾಗಿ ಓದುಗರಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುವಂತೆ ಸೃಜನಶಕ್ತಿಯನ್ನು ಬಳಸಿಕೊಂಡು ಅಭಿವ್ಯಕ್ತಿಗೊಳಿಸಲಾಗಿರುವುದನ್ನು ನೋಡುತ್ತೇವೆ. ಸೃಜನಶೀಲ ಸಾಹಿತ್ಯವನ್ನು ಕೆಲವು ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಳ್ಳುವಂತೆ ಅಂಕಣ ಬರಹದಲ್ಲಿಯೂ ಪ್ರಭಾವಯುತವಾಗಿರುವ ಕೆಲವು ಅಂಶಗಳನ್ನು ಗುರುತಿಸಿಕೊಳ್ಳಬಹುದಾಗಿದೆ.
ಬಹುತೇಕವಾಗಿ ಸಾಹಿತ್ಯದ ವಿಚಾರಗಳನ್ನು ಹೊರತರುವ ಉದ್ದೇಶದಿಂದಲೇ ಸಾಹಿತಿಗಳು ಅಂಕಣಗಳನ್ನು ಬರೆಯುತ್ತಿದ್ದರೆನ್ನಲಾಗಿದೆ. ಸಾರ್ವಕಾಲಿಕ ಸಾಹಿತ್ಯ ಮಂಡಣೆ ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಓದುಗರಿಗೆ ತಲುಪಿಸುವ ಪರಿಯಿಂದ ಹಾಗೂ ಅಂಕಣಕಾರರ ನಿರೂಪಣಾ ಸಾಮರ್ಥ್ಯ ಈ ಎಲ್ಲವುಗಳಿಂದ ಅಂಕಣ ಸಾಹಿತ್ಯ ಒಂದು ವಿಶಿಷ್ಟರೂಪವಾಗಿ ಬೆಳೆದು ವಿಶೇಷ ಸ್ಪಂದನೆಗೊಳಗಾಗಿದೆ ಎಂದು ಹೇಳಬಹುದು.
ಸಾಮಾಜಿಕ ಶೈಕ್ಷಣಿಕ ಸಂವೇದನೆ:
ಆಧುನಿಕ ಬರಹಗಳಲ್ಲಿನ ಅನನ್ಯತೆ ಎಂದರೆ ಬರಹಗಾರರ ಚಿಂತನೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಜನತೆಗೆ ತಲುಪಿಸುವ ನಿಟ್ಟನಲ್ಲಿ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸಿರುವುದು. ಆಯಾ ಕಾಲಘಟ್ಟಗಳ ಬರಹಗಾರರು ಸೃಜನಶೀಲ ಮತ್ತು ಸಾಮಾಜಿಕ ಹಿನ್ನೆಲೆಗಳಿಂದ ಪ್ರಭಾವಿತರಾಗಿ ಸಾಮಾಜಿಕ ವಸ್ತು ವಿಷಯಗಳನ್ನಿರಿಸಿಕೊಂಡು ಬರೆದು, ವಾಸ್ತವಿಕತೆಯನ್ನು ಪ್ರಸ್ತುತ ಪಡಿಸಿರುವುದು ಕಂಡುಬರುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಪತ್ರಿಕೆಗಳ ಹಿಂದೆ ಕೆಲವೊಂದು ಉದಾತ್ತವಾದ ಆಶಯಗಳು, ಮೌಲಿಕ ಪ್ರತಿಪಾದನೆಗಳು ಇದ್ದವು. ಜನರನ್ನು ಸಂಘಟಿಸುವುದು, ಸಾಮಾಜಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ತರುವುದು ಮುಖ್ಯವಾಗಿದ್ದಿತು. ಪ್ರಚಲಿತದಲ್ಲಿದ್ದ ಮೂಢನಂಬಿಕೆಗಳಿಗೆ, ಅರ್ಥವಿಲ್ಲದ ಸಾಂಪ್ರದಾಯಿಕ ಆಚರಣೆಗಳಿಗೆ ಪ್ರತಿಭಟನೆ ತೋರಿ ಸುಧಾರಣೆ ತರುವುದು ಕೆಲವು ಪತ್ರಿಕೆಗಳ ಉದ್ದೇಶವಾಗಿತ್ತು. ಅಂತೆಯೇ ಪತ್ರಿಕೆಗಳಲ್ಲಿ ಸುದ್ದಿಗಳೊಂದಿಗೆ ಲೇಖನ ಕಥೆ, ಅಂಕಣಗಳನ್ನು ಪ್ರಕಟಿಸಿ, ಆ ಮೂಲಕ ಸಮಾಜದ ಅಗತ್ಯಗಳಿಗೆ ಸ್ಪಂದಿಸಿ, ಪ್ರತಿಕ್ರಿಯಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ.
ಸ್ವಾತಂತ್ರೊತ್ತರದಲ್ಲಾದ ಶೈಕ್ಷಣಿಕ ಜಾಗೃತಿ ಮಹಿಳಾ ಚಳುವಳಿಗಳ ಪ್ರಭಾವಗಳಿಂದಾಗಿ ಮಹಿಳಾ ಬರಹಗಾರ್ತಿಯರು ತಮ್ಮ ಸಂವೇದನೆಗಳನ್ನು ಬರವಣಿಗೆಗಳ ಮೂಲಕ ಅಭಿವ್ಯಕ್ತಿಸತೊಡಗಿದ್ದು ಜಾಗೃತಿ -ಚಳುವಳಿ ಎಕಕಾಲಕ್ಕೆ ಸಂಭವಿಸಿ ಮಹಿಳಾ ಬರಹಗಳು ಪತ್ರಿಕೆಗಳಲ್ಲಿ ಕಾಣಿಸಿಕೊಂಡು ಸಾಮಾಜಿಕ ಕಾಳಜಿ, ಸ್ತ್ರೀ ಪರವಾದ ನಿಲುವುಗಳನ್ನು ಅಭಿವ್ಯಕ್ತಿಸಿರುವುದನ್ನು ಕಾಣುತ್ತೇವೆ.
ಅಂಕಣಗಳು ಅಂದಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಚರ್ಚಿಸುತ್ತಾ ಬಂದಿವೆ. ಕನ್ನಡ ಅಂಕಣ ಸಾಹಿತ್ಯದ ಉಗಮವೆಂದೇ ಗುರುತಿಸಲಾಗಿರುವ ಕನ್ನಡ ಕಣ', ಮಾತಿನ ಮಂಟಪ' ಹಾಗೂ ಚಿಂತನ ಮಂಥನ’ ಶೀರ್ಷಿಕೆಯಡಿ ಉದಯವಾಣಿ ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳ ಅಂಕಣಗಳಲ್ಲಿ ಸಾಮಾಜಿಕ ವಿಷಯಗಳನ್ನು ಚರ್ಚಿಸಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ಕು.ಶಿ. ಹರಿದಾಸ ಭಟ್ಟರ ಲೋಕಾಭಿರಾಮ', `ಕುಶಲೋಪರಿ' ಶೀರ್ಷಿಕೆಯಡಿ ಓದುಗರ ಉಭಯ ಕುಶಲೋಪರಿಯೊಂದಿಗೆ ಸಾಮಾಜಿಕ ಸಂದೇಶಗಳನ್ನು ತಲುಪಿಸುವ ಅಂಕಣಗಳಾಗಿದ್ದವು.
ಶಿಕ್ಷಣದ ಹೊಸ ಅರಿವಿನ ಪರಿಣಾಮವೆನ್ನುವಂತೆ ಅಂಧಶ್ರದ್ಧೆಗಳ ಸಾಮಾಜಿಕ ಕಟ್ಟು-ಕಟ್ಟಳೆಗಳ ವಿರುದ್ಧ ಧ್ವನಿ ಎದ್ದವು, ಮಹಿಳೆಯರು ತಮ್ಮ ಚಿಂತನೆಗಳನ್ನು ಇತರರೊಡನೆ ಹಂಚಿಕೊಂಡು ತಮ್ಮ ಜತೆಗೆ ಅವರನ್ನು ಬದಲಿಸಿ ಸಾಮಾಜಿಕ ಬದಲಾವಣೆ ತರುವ ಆಶಯ ಹಿಡೇರಿಸಿಕೊಳ್ಳಲು ಒಂದು ರೀತಿಯಲ್ಲಿ ಅಂದಿನ ಪತ್ರಿಕಾ ಬರಹಗಳು ಸಹಕಾರಿಯಾದವು. ಈ ಹಿನ್ನೆಲೆಯಲ್ಲಿ ನವೋದಯದ ಆರ್. ಕಲ್ಯಾಣಮ್ಮ ಸರಸ್ವತಿಬಾಯಿ ರಾಜವಾಡೆ ಹಾಗೂ ತಿರುಮಲೆ ರಾಜಮ್ಮ ಮೊದಲಾದ ಬರಹಗಾರ್ತಿಯರು ತಮ್ಮ ಬರವಣಿಗೆಗಳ ಮೂಲಕ ಸಮಾಜಕ್ಕೆ ಸ್ಪಂದಿಸಿದರು.
ಸರಸ್ವತಿಬಾಯಿ ರಾಜವಾಡೆ ಸುಪ್ರಭಾತ ಪತ್ರಿಕೆಯ ವನಿತಾ ವಿಭಾಗದಲ್ಲಿ ಪ್ರಕಟವಾಗುತ್ತಿದ್ದ ಅಕ್ಕನ ಒಲೆ'ಯಲ್ಲಿ ಮಹಿಳೆಯರ ಹಲವಾರು ಸಮಸ್ಯೆಗಳನ್ನು ಎತ್ತಿಕೊಂಡು ಉತ್ತರಿಸಿ, ಸಾಮಾಜಿಕ ಚಿಂತನೆಗೆ ದಾರಿ ಮಾಡಿಕೊಟ್ಟು ಹಲವಾರು ಭಗಿನಿಯರಿಗೆ ಮಾರ್ಗದರ್ಶಕರಾದರು. ಮಹಿಳೆ ಮತ್ತು ಸಾಮಾಜಿಕ ದ್ಯೇಯೋದ್ದೇಶಗಳನ್ನಿರಿಸಿಕೊಂಡು ಪತ್ರಿಕೆಗಳಲ್ಲಿ ಬರೆದ ಆರ್. ಕಲ್ಯಾಣಮ್ಮ ಸ್ತ್ರೀಯರು ಸಮಾಜ ಸೇವೆಯೂ', `ಹಿಂಧೂ ಸ್ತ್ರೀಯ ಆದರ್ಶಗಳು', ಎಂಬ ಪ್ರಗತಿಪರ ಚಿಂತನೆಯ ಅಂಕಣ ಲೇಖಗಳ್ನು ಬರೆದಿದ್ದಾರೆ. “ಮಹಿಳೆಯರು ಸಮಾಜದ ಸದಸ್ಯತ್ವ ವಹಿಸಬೇಕು ಮತ್ತು ಸಂಘಗಳು ಶ್ರೀಮಂತ, ಮಾಧ್ಯಮ, ಬಡವ ಮೂರು ವರ್ಗಗಳಿಗೂ ಅಗತ್ಯವಾಗುವ ಉಪಯುಕ್ತ ರೀತಿ ಕಾರ್ಯಕ್ರಮ ರೂಢಿಸಬೇಕು” ಎಂಬ ಕರೆ ನೀಡಿ, ಸ್ತ್ರೀಯನ್ನು ಉತ್ತೇಜಿಸಿದ್ದಾರೆ. (ಹಿಂದೂ ಸ್ತ್ರೀಯ ಆದರ್ಶಗಳು, ಸರಸ್ವತಿ ಪತ್ರಿಕೆ-ಮೇ, ೧೯೨೮). ಹೀಗೆ ಸಾಮಾಜಿಕವಾಗಿ ಮಹಿಳೆಯರು ಸ್ಪಂದಿಸಲು ಒಂದು ರೀತಿಯಲ್ಲಿ ಈ ಬರಹಗಳು ಪ್ರೇರಣೆಯಾದವು.
“ಆಯಾ ಕಾಲದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಆಗು-ಹೋಗುಗಳಿಗೆ ಸೃಜನಶೀಲ ಪ್ರತಿ ಸ್ಪಂದನೆಗಳಾಗಿ, ಸಾಂಸ್ಕೃತಿಕ ಹಾಗು ಸಾಮಾಜಿಕ ಹಿನ್ನೆಲೆಯ ಅಂಕಣಗಳು ರೂಪಿಸಿರುವ ಚಿತ್ರಗಳು ಆಧುನಿಕ ಕರ್ನಾಟಕ ಚರಿತ್ರೆಯ ರೂಪದಲ್ಲಿ ನೋಡಲು ಸಾಧ್ಯವಾಗಿದೆ.” ಎನ್ನಲಾಗಿದೆ. (ಪ್ರಜಾವಾಣಿ ರಸಪಥಗಳು, ಅಂಕಣ ಕರ್ನಾಟಕ: ೧೨ ಆಗಸ್ಟ್ ೨೦೨೩.) ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಅಂಕಣಗಳಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಚಹರೆಗಳನ್ನು ದಾಖಲಿಸುವ ವಿಶಿಷ್ಟ ಅಂಕಣ ರಹಮತ್ ತರಿಕೇರೆ ಅವರ 'ನಡೆದಷ್ಟು ನಾಡು' ಇದೊಂದು ಅಭೂತ ಪೂರ್ವ ಪ್ರಯೋಗ, ನಟರಾಜ್ ಹುಳಿಯಾರ್‌ರವರ `ಕನ್ನಡಿ'. ಹಾಗು ಲಿಂಗದೇವರು ಹಳೆಮನೆ ಅವರ ‘ಬೆಳಕು ಬೆಳದಿಂಗಳು’ ಮತ್ತು ಯು. ಆರ್. ಅನಂತಮೂರ್ತಿಯವರ ‘ಅನುಸಂಧಾನ’. ಸಾಂಸ್ಕೃತಿಕ ವೈಚಾರಿಕತೆಯ ಪ್ರಖರತೆಯಿಂದ ಗಮನಸೆಳೆದ ಅಂಕಣ ಬರಹಗಳು.
೭೦-೮೦ ರದಶಕಗಳಲ್ಲಿ ಪ್ರಕಟವಾಗುತ್ತಿದ್ದ ಬಹುತೇಕ ಅಂಕಣ ಬರಹಗಳು ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರುವಂತಹವು. ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ಬರೆದ ಸಂಪಾದಕೀಯ ಅಂಕಣಗಳಲ್ಲಿ ನಿರ್ಭೆಡೆಯ ಬರಹಗಳಾದ ಸಂತೋಷಕುಮಾರ ಗುಲ್ವಾಡಿಯವರ ಅಂತರಂಗ ಬಹಿರಂಗ’ ಮತ್ತು ಬಿ.ವಿ. ವೈಕುಂಟರಾಜುರವರ ಸಂಪಾದಕೀಯ ಡೈರಿ’ ಇವು ಸಮಾಜ. ಸಂಸ್ಕೃತಿಯನ್ನು ಪ್ರತಿಫಲಿಸುವ ಚಿತ್ರಣಗಳು. `ತರಂಗ’ ವಾರ ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿಯವರು ರಾಜಕೀಯ, ಸಮಾಜ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಸಮಕಾಲೀನ ವಿಚಾರಗಳಿಗೆ ಪ್ರತಿಕ್ರಿಯಾತ್ಮಕವಾಗಿ ಬರೆದ ಬರಹಗಳು ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಬಹುಪಾಲು ಲೇಖನಗಳು. ವಿಡಂಬನೆ, ವಿಮರ್ಶೆಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಬಯಸುವಂತವು. ಆಯಾ ಕಾಲದ ಸಾಮಾಜಿಕ, ರಾಜಕೀಯ ಆಗು-ಹೋಗುಗಳಿಗೆ ಸ್ಪಂದಿಸಿ, ಸಾಮಾಜಿಕ ಸಂಸ್ಥೆಗಳಿಗೆ ಕನ್ನಡಿ ಹಿಡಿದಂತವು. ಗುಲ್ವಾಡಿಯವರು ಬರೆದ ಲೇಖನಗಳಲ್ಲಿ ಸಾಹಿತ್ಯದ ಒಳಹುಗಳಿವೆ. ಸಾಮಾಜಿಕ ಮಾರ್ಧವತೆಗಳಿವೆ,
೧೯೭೦ರ ದಶಕಗಳಲ್ಲಿ ಪ್ರಜಾವಾಣಿ’, ಬೆಂಗಳೂರು ಮಿರರ್’ ಪತ್ರಿಕೆಗಳಲ್ಲಿ ವಾರದ ಅಂಕಣ ಬರೆಯುತ್ತಿದ್ದ ವಿಜಯಾರವರ ಸಾಮಾಜಿಕ ಜಾಗೃತಿ ಮೂಡಿಸುವ ಸುದ್ದಿ ಕನ್ನಡಿ' ಅಂಕಣದಲ್ಲಿ ಬರೆದ ಲೇಖನಗಳು ಸಾಮಾಜಿಕ ಭ್ರಷ್ಟತನ, ಕೊಳಕು ರಾಜಕೀಯಗಳ ಶುದ್ಧೀಕರಣಕ್ಕಾಗಿ ಜನತೆಯಲ್ಲಿ ಎಚ್ಚರ ಮೂಡಿಸಲು ಪ್ರಮುಖ ಅಸ್ತ್ರದಂತೆ ಎಲ್ಲಾ ಕಾಲದ ಪ್ರಗತಿಪರ ಆಶಯಕ್ಕೂ ಕನ್ನಡಿ ಹಿಡಿಯುತ್ತವೆ. ಸಾಹಿತಿಗಳಿಗೂ ಸಾಹಿತ್ಯಕ್ಕೂ ಸಂಬಂಧಿಸಿದ ವಿಷಯಗಳನ್ನು ಸುದ್ದಿಗಳಂತೆ ತಮ್ಮ ಅನಿಸಿಕೆಗಳೊಂದಿಗೆ ಪ್ರಕಟಿಸಲು ನಡೆಸಿದ ಪ್ರಯೋಗಗಳನ್ನು ಮಾತಿನಿಂದ ಲೇಖನಿಗೆ' ಅಂಕಣದಲ್ಲಿ ಚರ್ಚಿಸಿ, ಸಮಕಾಲೀನ ಸಮಾಜದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ `ಸಂಕುಲ' ಎಂಬ ಅಂಕಣ ಲೇಖನಗಳ ಮಾದರಿ ಸಂಕಲನವನ್ನು ಹೊರತಂದಿದ್ದಾರೆ.
ಸಾಮಾಜಿಕ ತೊಡಕುಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರೂಪಿಸುವ `ಮಲ್ಲಿನಾಥನ ಧ್ಯಾನ’ ವೈದೇಹಿಯವರ ವಿಶೇಷ ಅಂಕಣಲೇಖನಗಳು. ಸಮಾಜದ ವ್ಯಕ್ತ, ಅವ್ಯಕ್ತ ರೂಪಗಳೆರಡನ್ನು ಚರ್ಚಿಸುವ ವೈದೇಹಿಯವರ ಬರಹಗಳಲ್ಲಿ ಸಮಾಜದಲ್ಲಿ ಕಂಡು ಕಾಣದಂತಹ ದೋಷಗಳನ್ನು ವಿಶ್ಲೇಷಿಸುತ್ತಾರೆ. ನಿತ್ಯದ ಸಾಮಾಜಿಕ ಸಂದರ್ಭ, ಸಮಾಜದ ಸ್ಥಿತಿಗತಿಗಳು ಹೇಗಿರುತ್ತವೆ ಎಂಬ ಪಾರದರ್ಶಕತೆ ಇರುತ್ತದೆ. ಸಮಾಜದ ವಿಭಿನ್ನ ಚಿತ್ರಣಗಳೊಂದಿಗೆ ಕಾಲದ ಮಹತ್ವ, ಮನುಷ್ಯ ಲೋಕದ ಹಿಂಸೆಯ ಅನಾವರಣ, ಸ್ತ್ರೀಲೋಕದ ಸೂಕ್ಷ್ಮಗಳಿವೆ. 'ಸಿಂಗರ್ ಮೆಷಿನ್ ಮೀನಾಕ್ಷಮ್ಮ' ಅಂಕಣದಲ್ಲಿ ಮೀನಾಕ್ಷಮ್ಮನ ದಿನಚರಿ, ಅವರ ಕಳಕಳಿ, ಆ ಒಂದು ಹೊಲಿಗೆ ಮಿಷನ್‌ನಿಂದಾಗಿ ಅವರ ಸಂಪರ್ಕಕ್ಕೆ ಬರುವವರು, ಅವರ ಮನೆಯ ಚಾವಡಿ, ಮೀನಾಕ್ಷಮ್ಮನ ತಾಯಿಯ ಕಥಾವಾಚನ, ಈ ಎಲ್ಲ ಮಜಲುಗಳು ಹಲವು ಸಾಹಿತ್ಯ ರೂಪಗಳು ಸೇರಿಕೊಂಡು ಶ್ರೀಮಂತಗೊಳಿಸಿವೆ. ಕಾಲಕಾಲಕ್ಕೆ ಕಾಣಿಸಿಕೊಂಡ ನವೀನ ಮಾದರಿಗಳು ಹೊಸ ತಲೆಮಾರಿನವರಿಂದ ಮುಂದುವರೆಯುತ್ತಾ ಸಾಹಿತ್ಯ ರೂಪಗಳಲ್ಲಿ ಚಲನಶೀಲ ಪಲ್ಲಟಗಳನ್ನು ತಂದು, ತಾತ್ವಿಕಾಂಶಗಳನ್ನು ರೂಪಿಸಿರುವುದನ್ನು ಕಾಣುತ್ತೇವೆ. ಸಾಹಿತ್ಯಲೋಕದ ವಿವಿಧ ಮಜಲುಗಳನ್ನು ತೆರೆದಿಡುವ ಅಂಕಣ ಬರಹಗಳಲ್ಲಿ ಸ್ತ್ರೀವಾದದ ಚಿಂತನೆಗಳಿವೆ, ಕಥನಲೋಕದ ಮಾದರಿಗಳಿವೆ, ವಿನೋದ, ವಿಡಂಬನೆಗಳಿವೆ. ವಿಮರ್ಶೆ, ವಿಶ್ಲೇಷಣೆಗಳಿವೆ. ಹೀಗೆ ಕನ್ನಡ ಅಂಕಣ ಬರಹಗಳು ಸಾಹಿತ್ಯ, ಸಮಾಜ, ಸಂಸ್ಕೃತಿ, ನಾಡು-ನುಡಿಯನ್ನು ಬಿಂಬಿಸುವ ಹಾದಿಯಲ್ಲಿ ಮಹತ್ವಪೂರ್ಣವಾದ ಬೆಳವಣಿಗೆಯಾಗಿ ಸಾಮಾಜಿಕವಾಗಿ ಸ್ಪಂದಿಸುತ್ತಿರುವುದು ರೋಚಕ ಸಂಗತಿಯಾಗಿದೆ.
ಆಕರ ಗ್ರಂಥಗಳು
೧. ಅನುಪಮಾ ನಿರಂಜನ: ನೆನಪು ಸಿಹಿ-ಕಹಿ, ಡಿ.ವಿ.ಕೆ.ಮೂರ್ತಿ ಪ್ರಕಾಶನ, ಮೈಸೂರು - ೧೯೮೫.
೨. ಆಶಾದೇವಿ ಎಂ.ಎಸ್: ನಾರೀಕೇಳಾ, ಪ್ರಜಾವಾಣಿ ಪ್ರಕಾಶನ, ಬೆಂಗಳೂರು - ೨೦೧೬.
೩. ಧರಣೀದೇವಿ ಮಾಲಗತ್ತಿ: ದಹರಾಕಾಶ, ರೂಪ ಪ್ರಕಾಶನ, ಬೆಂಗಳೂರು - ೨೦೧೨.
೪. ನೇಮಿಚಂದ್ರ: ಬದುಕು ಬದಲಿಸಬಹುದು (ಅಂಕಣ ಸಂಕಲನ), ಮೊದಲನೇ ಮುದ್ರಣ, ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು - ೨೦೦೫.
೫. ಪದ್ಮರಾಜ ದಂಡಾವತಿ: ಅವಲೋಕನ ಸಾಹಿತ್ಯ, ನಂದನ ಪ್ರಕಾಶನ - ೨೦೦೯.
೬. ಪ್ರತಿಭಾ ನಂದಕುಮಾರ್: ಮಹಿಳಾ ಸಾಹಿತ್ಯ ಸಂಪುಟ (ಅಂಕಣ ಬರಹ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು - ೨೦೨೧.
೭. ವೈದೇಹಿ: ಮಲ್ಲಿನಾಥನ ಧ್ಯಾನ, ವಸಂತ ಪ್ರಕಾಶನ - ೨೦೧೨. ೮. ಸದಾನಂದ ಕನವಳ್ಳಿ: ಅಂಕಣ ಸಾಹಿತ್ಯ, ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ - ೨೦೦೬.
೯. ಸುರೇಂದ್ರ ಕುಮಾರ ಕೆರಮಗಿ: ಕನ್ನಡದಲ್ಲಿ ಅಂಕಣ ಸಾಹಿತ್ಯ, ಪ್ರಸಾರಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ - ೨೦೧೨.
ಸಮಾಚಾರ ಪತ್ರಿಕೆಗಳು
೧. ಅಚಲ ಪತ್ರಿಕೆ: ಮಾರ್ಚ್ - ೧೯೯೨.
೨. ಉದಯವಾಣಿ: ಪುರವಣಿ, ೨೧ ನವೆಂಬರ್ - ೨೦೧೮.
೩. ಕನ್ನಡ ಸಾಹಿತ್ಯ ಪತ್ರಿಕೆಗಳು: (ಇತಿಹಾಸ-ವರ್ತಮಾನ), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು - ೧೯೯೩.
೪. ಪ್ರಜಾವಾಣಿ: ೧೫ ಜುಲೈ - ೨೦೧೮.
೫. ಬೆಂಗಳೂರು ಮಿರರ್: ೨೫ ಮಾರ್ಚ್ - ೨೦೨೩.
೬. ವಾರ್ತಾಭಾರತಿ: ೦೪ ಏಪ್ರಿಲ್ - ೨೦೨೦.