ಪರಂಪರೆ ಮತ್ತು ನವೋದಯ ಸಾಹಿತ್ಯ
Authors/Creators
Description
ಮಾನವನ ಸಂಸ್ಕೃತಿ ಮತ್ತು ನಾಗರಿಕತೆಗೆ ಸುದೀರ್ಘವಾದ ಪರಂಪರೆ ಇದೆ. ಪ್ರಾಣಿಯಂತಿದ್ದ ಅಂದಿನ ಮಾನವ ಜೀವನಕ್ಕೂ, ವೈವಿಧ್ಯಮಯವಾಗಿ ಜೀವನ ಕ್ರಮವನ್ನು ಕಂಡುಕೊಂಡ ಇಂದಿನ ಮಾನವನ ಜೀವನ ಕ್ರಮಕ್ಕೂ ಅಜಗಜಾಂತರದ ವ್ಯತ್ಯಾಸವನ್ನು ಕಾಣುತ್ತೇವೆ. ಈ ವೈಪರೀತ್ಯವನ್ನು ಗಮನಿಸಿದಾಗ, ಮಾನವನು ಅನೇಕ ಮಜಲುಗಳನ್ನು ದಾಟಿಕೊಂಡು ಬಂದಿದ್ದಾನೆ ಎಂಬುದು ಸರಿ. ಮಾನವನ ಈ ವಿಕಾಸದ ಚರಿತ್ರೆಯನ್ನು, ಬೌದ್ಧಿಕ ಮಜಲುಗಳನ್ನು ಸಾಹಿತ್ಯ ಪರಂಪರೆ ನಮಗೆ ತಿಳಿಸಿಕೊಡುತ್ತದೆ.
ಸಾಹಿತ್ಯ ರಚನೆ ಮಾನವನು ಸಾಧಿಸಿದ ಅದ್ಭುತಗಳಲ್ಲಿ ಒಂದು. ಮಾನವನ ಜೀವನ ಮತ್ತು ಸಾಹಿತ್ಯಗಳೆರಡೂ ಪರಸ್ಪರ ಪೂರಕ ಮತ್ತು ಪೋಷಕವಾದವುಗಳು. ಒಂದರಿಂದ ಒಂದು ಪ್ರಭಾವಿತವಾಗಿ ಬೆಳೆಯುತ್ತಾ ಹೋಗುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ರಚನೆ ಮಾನವನು ವಿಚಾರಶೀಲನಾದಾಗಿನಿಂದ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ರಚಿಸುತ್ತಾ, ರಕ್ಷಿಸುತ್ತಾ ಬಂದಿದ್ದಾನೆ. ಸಾಹಿತ್ಯವೆಂಬುದು ಮನುಷ್ಯನ ಸಮಸ್ತ ಅನುಭವಗಳ ಅಭಿವ್ಯಕ್ತಿಯಾಗಿರುವುದರಿಂದ ಸಹಜವಾಗಿ ಅದರಲ್ಲಿ ವೈವಿಧ್ಯತೆ ಮತ್ತು ಸಂಕೀರ್ಣತೆಗಳು ಉಂಟಾಗುತ್ತವೆ. ಸೃಜನಶೀಲ ಲೇಖಕರು ಸಾಹಿತ್ಯವನ್ನು ವಿವಿಧ ರೂಪಗಳಲ್ಲಿ ಸೃಷ್ಟಿಸುತ್ತಾ ಹೋಗುತ್ತಾರೆ. ಇದರ ಪರಿಣಾಮವಾಗಿಯೇ ಸಾಹಿತ್ಯ ಪರಂಪರೆಗಳು ವೈವಿಧ್ಯಮಯವಾಗಿ ಬೆಳೆದಿವೆ. ಇದಕ್ಕೆ ಕನ್ನಡವೂ ಹೊರತಲ್ಲ. ಪರಂಪರೆಯುದ್ದಕ್ಕೂ ಅನೇಕ ಪ್ರಕಾರಗಳಲ್ಲಿ, ಅಭಿವ್ಯಕ್ತಿ ಮತ್ತು ಆಶಯಗಳಿಗನುಗುಣವಾಗಿ ಬಹುಮುಖಿಯಾಗಿ ಸಾಗಿಬಂದಿದೆ. ಮೌಖಿಕ ಪರಂಪರೆಯಲ್ಲಿ ಕಂಠಸ್ಥವಾಗಿ, ಲಿಖಿತ ಪರಂಪರೆಯಲ್ಲಿ ಅಕ್ಷರ ರೂಪದಲ್ಲಿ - ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ ಪರಂಪರೆಯ ಆವಸ್ಥೆಗಳಾಗಿ ಬೆಳೆದುಬಂದರೆ, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ ಪ್ರಾರಂಭಗೊಂಡು ವೈವಿಧ್ಯಮಯವಾಗಿ ಮುನ್ನಡೆಯುತ್ತಿರುವ ಸಾಹಿತ್ಯವೇ ‘ಆಧುನಿಕ’ ಅಥವಾ ‘ಹೊಸಗನ್ನಡ ಸಾಹಿತ್ಯ’ ಎಂದು ಪ್ರಚಲಿತವಾಗಿದೆ. ಈ ಕಾಲಘಟ್ಟದ ಸಾಹಿತ್ಯ ಪರಂಪರೆಯು ಕಾವ್ಯ, ಮಹಾಕಾವ್ಯ, ಕಥೆ, ಕಾದಂಬರಿ, ನಾಟಕ ಮುಂತಾದ ಹಲವಾರು ರೂಪಗಳಲ್ಲಿ ಸಮಕಾಲೀನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಟ್ಟಿದೆ. ದೃಷ್ಟಿ ಧೋರಣೆಗಳಿಗೆ ಅನುಗುಣವಾಗಿ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಎಂದು ನಾಲ್ಕು ಘಟ್ಟಗಳಾಗಿ ವರ್ಗೀಕರಿಸಲಾಗಿದೆ. ಕಾಲಮಾನಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಯ ಮನೋಧರ್ಮದಲ್ಲಿ ಆಗಿರುವ ಬದಲಾವಣೆಗಳನ್ನು ಈ ನಾಲ್ಕು ಘಟ್ಟಗಳ ಮೂಲಕ ಗುರುತಿಸಲಾಗಿದೆ. ಈ ಮುಖೇನ ಮೂಡಿಬಂದ ಸಾಹಿತ್ಯ ರೂಪಗಳು, ಸಮಕಾಲೀನ ಸ್ಥಿತಿಗತಿಗಳು, ಸಾಮಾಜಿಕ ಮೌಲ್ಯಗಳು ಸಾಹಿತ್ಯ ಪರಂಪರೆಯಲ್ಲಿ ಹೇಗೆ ಮೂಡಿಬಂದಿವೆ ಎನ್ನುವ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, “ಪರಂಪರೆ ಮತ್ತು ನವೋದಯ ಸಾಹಿತ್ಯ” ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಮುಖ ವಿಚಾರ ಪರಂಪರೆಗಳನ್ನು ಈ ಸಂಶೋಧನಾ ಲೇಖನದಲ್ಲಿ ಮಂಡಿಸಲಾಗಿದೆ. ಪ್ರಸ್ತುತ ಈ ಲೇಖನದ ಸಂಕ್ಷಿಪ್ತ ಸಾರಲೇಖ ಇದಾಗಿದೆ.
Files
ಶ್ಯಾಮೂರ್ತಿ ಜಿ..pdf
Files
(300.7 kB)
| Name | Size | Download all |
|---|---|---|
|
md5:7a4e98ae52df184b1c094373a1de4912
|
300.7 kB | Preview Download |